ದುಡಿಮೆಯ ಒಂದು ಭಾಗವನ್ನು ಅಶಕ್ತರಿಗಾಗಿಯೇ ಮೀಸಲಿಡುವ ಚಂದ್ರಣ್ಣ-Times of karkala

“ಅನೇಕ ಸೇವಾ ಸಂಸ್ಥೆಗಳ ಸೇವಕ ಚಂದ್ರಣ್ಣನ ಬಾಳಿನಲ್ಲಿ ತಿರುವು ನೀಡಿದ ಆ ಒಂದು ಘಟನೆ”


ನಮಸ್ಕಾರ ಓದುಗರೇ, ಇವತ್ತು ಒಬ್ಬ ವಿಶೇಷ ವ್ಯಕ್ತಿಯನ್ನು ನಿಮ್ಮ ಪರಿಚಯಿಸ್ತಾ ಇದ್ದೇನೆ.

     ಸಿರಿವಂತಿಕೆ ಯಾರಿಗಿಲ್ಲ ಹೇಳಿ.ಆದರೆ ಹೃದಯ ಶ್ರೀಮಂತಿಕೆ ಆನ್ನೋದು ಕೆಲವರಲ್ಲಿ ಮಾತ್ರ ಬರುವಂಥದ್ದು. ಅಂತಹವರು  ಪರರ ಕಣ್ಣೀರನ್ನು ಒರೆಸುವ, ನೊಂದವರ ಬಾಳಲ್ಲಿ ಆಶಾಕಿರಣವಾಗುವ ಮೂಲಕ ನಮಗೆ ಆದರ್ಶರಾಗುತ್ತಾರೆ.ತಾನೂ ಬೆಳೆದು ತನ್ನೋಂದಿಗೆ ಇತರರನ್ನೂ ಬೆಳೆಸುತ್ತಾ ತನ್ಮೂಲಕ ಸಾಧ್ಯವಾದಷ್ಟು ಜನರ ಜೀವನವನ್ನೂ ಬೆಳಗಿಸುತ್ತಾರೆ. ತಾನು ದುಡಿದ ಒಂದು ಪಾಲು ಹಣವನ್ನು ಜಾತಿ ಧರ್ಮ ಬೇಧವಿಲ್ಲದೇ ಕಷ್ಟದಲ್ಲಿರುವವರಿಗೆ ಹಂಚುವ ಚಂದ್ರಣ್ಣನನ್ನು ನಿಮ್ಮ ಮುಂದೆ ಪರಿಚಯಿಸುತ್ತಿದ್ದೇನೆ.

     ʼಚಂದ್ರಣ್ಣʼ ಈ ಹೆಸರು ಸೇವಾ ಸಂಸ್ಥೆಗಳ, ಸಂಘಟನೆಗಳಲ್ಲಿ ಅತೀ ಹೆಚ್ಚು ಕೇಳಿ ಬರುತ್ತಿರುವ ಹೆಸರು. ಬಹುಶಃ ಚಂದ್ರಶೇಖರ್ ಬಿ. ಸಿ.ರೋಡ್ ಎಂದರೆ ಯಾರಿಗೂ ಗೊತ್ತಿರಲಿಕ್ಕಿಲ್ಲವೇನೋ…

 ಅದೆಷ್ಟೋ ಸಮಾಜಸೇವಾ ಸಂಘಟನೆಗಳೀಗೆ ತಾಯಿಯ ಸ್ಥಾನದಲ್ಲಿ ನಿಂತು ಪೋಷಿಸುತ್ತಿರುವವರು ಚಂದ್ರಣ್ಣ…

   ಚಂದ್ರಣ್ಣ ಹುಟ್ಟಿದ್ದು ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಕರ್ವೆಲ್ ಎನ್ನುವ ಮುದಲಾಜೆಯಲ್ಲಿ. ತಂದೆ ಮೋನಪ್ಪ ಪೂಜಾರಿ ತಾಯಿ ಸುಶೀಲ ಪೂಜಾರ್ತಿ. ಈ ದಂಪತಿಗಳಿಗೆ ಒಟ್ಟು ಎಂಟು ಜನ ಮಕ್ಕಳು. ಅದರಲ್ಲೂ ಸೌಭಾಗ್ಯವೇನೋ ಎಂಬಂತೆ  ಆರು ಜನ ಹೆಣ್ಣು ಮಕ್ಕಳು. ನಾಲ್ಕನೆಯವರೇ ಚಂದ್ರಣ್ಣ.

 ಕಲಿಕೆಯಲ್ಲಿ ಆಸಕ್ತಿ ಹೊಂದಿದ್ದ ಚಂದ್ರಣ್ಣನಿಗೆ ತಾಯಿ ಕಟ್ಟಿದ ಬೀಡಿಯಿಂದ ಬಂದ ಹಣ ವಿಧ್ಯಾಭ್ಯಾಸಕ್ಕೆ ಸಾಲುತ್ತಿರಲಿಲ್ಲ. ಹಾಗಾಗಿ ಮನೆಯ ಪಕ್ಕದಲ್ಲಿರುವ ಧಣಿಗಳ ಮನೆಗೆ ದಿನಕ್ಕೆ 60 ರೂಪಾಯಂತೆ ವಾರದಲ್ಲಿ ಎರಡು ದಿನ ಕೆಲಸಕ್ಕೆ ಹೋಗುತ್ತಾರೆ. ಹೀಗೆ ಕೂಲಿ ಕೆಲಸದಿಂದ ಮತ್ತು ತಾಯಿಯ ಬೀಡಿಯ ದುಡ್ಡಿನಿಂದ  ಚಂದ್ರಣ್ಣನ ವಿದ್ಯಾಭ್ಯಾಸ ನಡೀತಾ ಇರುತ್ತದೆ.

   ಕಬ್ಬಿಣ ಕೆಂಡದ ಮೇಲೆ ಬಿದ್ದಾಗಲೇ ನೋಡಿ ಬೆಂಡಾಗೋದು.  ವಿಧ್ಯಾಭ್ಯಾಸದಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಪ್ರಥಮ ರಾಂಕ್‌ನಲ್ಲಿ ಎಸೆಸೆಲ್ಸಿ ಪಾಸ್ ಆಗಿದ್ದ ಚಂದ್ರಣ್ಣನಿಗೆ   ಒಂದು ದೊಡ್ಡ ಆಘಾತ ಕಾದಿರುತ್ತದೆ.

 ಆಕಸ್ಮಿಕವಾಗಿ  ಚಂದ್ರಣ್ಣನ ತಂದೆ ತೆಂಗಿನ ಮರದಿಂದ ಬಿದ್ದು ಆಸ್ಪತ್ರೆಯ ಪಾಲಾಗುತ್ತಾರೆ.ಮೂರು ತಿಂಗಳು ಆಸ್ಪತ್ರೆಯಲ್ಲಿಯೇ ಕಳೆದ ಚಂದ್ರಣ್ಣ ಕಾರಣಾಂತರಗಳಿಂದ ವಿದ್ಯಾಭ್ಯಾಸ ಕೊನೆಗೊಳಿಸಬೇಕಾಗುತ್ತದೆ.

   ತದನಂತರ ಸಣ್ಣ ಪುಟ್ಟ ಸಂಬಳಕ್ಕಾಗಿ ಕೂಲಿ ಕೆಲಸವನ್ನು ಮಾಡುತ್ತಿರುತ್ತಾರೆ. ಕಾಲ ಚಕ್ರ ಯಾರ ಮಾತನ್ನೂ ಕೇಳಲ್ಲ. ಚಂದ್ರಣ್ಣ ಕೇವಲ ಚಂದ್ರಣ್ಣನಾಗಿಲ್ಲ. ತಾಯಿಗೆ ಎಲ್ಲಾ ಹೆಣ್ಣು ಮಕ್ಕಳ ಮದುವೆಯಾಗಬೇಕೆಂಬ ಕನಸಿದೆ. ಚಂದ್ರಣ್ಣ ಒಬ್ಬ ಜವಬ್ದಾರಿಯುತ ಅಣ್ನನಾಗಿದ್ದಾರೆ ಕೂಡಾ.

ತನ್ನ ಅಕ್ಕ ತಂಗಿಯರ ಮದುವೆಯ ಜವಬ್ದಾರಿ ಕೂಡಾ ಹೆಗಲ ಮೇಲಿದೆ. ಇನ್ನು ಸಣ್ಣ ಪುಟ್ಟ ಕೆಲಸಗಳಿಂದ ತನ್ನ ಗುರಿ ಉದ್ದೇಶ ಸಾಧ್ಯವಿಲ್ಲ ಎದು ಅರಿತ ಚಂದ್ರಣ್ಣ ಸ್ನೇಹಿತರ ನೆರವಿನಿಂದ  ಮಂಗಳೂರಿನ ಮೋತಿ ಮಹಲ್ ಹೋಟೇಲ್ ನಲ್ಲಿ ಕೆಲಸಕ್ಕೆ  ಸೇರುತ್ತಾರೆ.

ವಯಸ್ಸಿಗೆ  ಬಂದ ಮೊದಲ  ಅಕ್ಕನ ಮದುವೆ ಚಂದ್ರಣ್ಣನ ಹೆಗಲ ಮೇಲಿರುವ ದೊಡ್ಡ ಜವಬ್ದಾರಿ. ಆದರೆ ಕೈಯಲ್ಲಿರೋದು ಮಾತ್ರ ಸಣ್ಣ ಮೊತ್ತ. ಆದರೆ ಚಂದ್ರಣ್ಣ  ದೃತಿಗೆಡುವ ಜೀವವಲ್ಲ. ಹೊಟೇಲ್ ನಲ್ಲಿಯೇ ಕೆಲಸ ಮಾಡುತ್ತ ಬೆಳಗೆದ್ದು ಸೈಕಲ್ ನಲ್ಲಿ  ಮನೆಮನೆಗೆ ಪೇಪರ್ ಹಾಕುತ್ತಾರೆ. ಹೀಗೆ ರೂಪಾಯಿಗೆ ರೂಪಾಯಿಯನ್ನು ಸೇರಿಸುತ್ತಾರೆ. ದೊಡ್ಡ ಅಕ್ಕನ ಮದುವೆಯನ್ನು ಭಯದಿಂದಲೇ ಮುಗಿಸುತ್ತಾರೆ.

   ದೊಡ್ಡ ಅಕ್ಕನ ಮದುವೇಯೇನೋ ಆಗುತ್ತೆ ಆದರೆ ಜವಬ್ದಾರಿ ಇನ್ನೂ ಮುಗಿದಿಲ್ಲ. ಒಂದು ಕಡೆ ತಾಯಿಯ ಕನಸು,ಮನೆಯ ಬಡತನ, ತನ್ನ ಮೇಲಿರುವ ದೊಡ್ಡ ಜವಬ್ದಾರಿಗಳು.., ಹೀಗೆ ಕೊನೆಗೆ ಚಂದ್ರಣ್ಣ ವಿದೇಶಕ್ಕೆ ಹೋಗಿ ದುಡಿಯುವ ಯೋಚನೆಯನ್ನು ಮಾಡುತ್ತಾರೆ.

 ಆದರೆ ವಿದೇಶಕ್ಕೆ ಹೋಗಲು  ಕನಸು ಕಂಡಿದ್ದ ಚಂದ್ರಣ್ಣನ ಮುಗ್ದತೆಯನ್ನು ದುರ್ಬಳಕೆ ಮಾಡಿಕೊಂಡ ಪಾಸ್ ಪೋರ್ಟ್ ದೊರಕಿಸಿ ಕೊಡುವ ಏಜೆಂಟ್ ಸಂಸ್ಥೆಯೊಂದು ಸರಿ ಸುಮಾರು ಹತ್ತು ಲಕ್ಷ ರೂಪಾಯಿಯನ್ನು ಮೋಸ ಮಾಡುತ್ತಾರೆ.

2008 ಅಕ್ಟೋಬರ್ ನಲ್ಲಿ ಚಂದ್ರಣ್ಣ ನ ಬಾಳಿನಲ್ಲಿ ಒಂದು ಶುಭ ಸುದ್ದಿ. ತನ್ನ ಬಹುಕಾಲದ  ಆಸೆಯಂತೆ ಕಷ್ಟವನ್ನು ಮೆಟ್ಟಿ ನಿಲ್ಲಬೇಕಾದರೆ ವಿದೇಶದಲ್ಲಿ ದುಡಿಯಬೇಕು ಎಂಬ ಕನಸು ನನಸಾಗುವ ಕಾಲವದು. ಕೆಲಸ ಕನ್ಫರ್ಮ್ ಆಗಿದ್ದೆ  ತಡ ಚಂದ್ರಣ್ಣ  ಒಂದು ಕ್ಷಣವೂ ತಡ ಮಾಡದೆ  ಮನೆಯವರ ಕಾಲಿಗೆ ಎರಗಿ ಆಶಿರ್ವಾದವನ್ನು ಪಡೆದು ಮಂಗಳೂರಿನಿಂದ  ಮುಂಬೈ ಗೆ ಹೊರಡುತ್ತಾರೆ. ಆದರೆ ಮಾಯಾನಗರಿ ಮುಂಬೈನಲ್ಲಿ ನಡೆದದ್ದು  ಬೇರೆಯೇ.

ಮುಂಬೈಗೆ ಹೋದ ಮೇಲೆ ಚಂದ್ರಣ್ಣ ನಿಗೆ ತಾನು ಮೋಸ ಹೋದದ್ದು ತಿಳಿಯುತ್ತದೆ. ಪಾಸ್ಪೋರ್ಟ್ ಕಂಪೆನಿ ಉದ್ಯೋಗ ಕೊಡಿಸುವ ಹೆಸರಿನಲ್ಲಿ ಸುಮಾರು ಏಳು ಲಕ್ಷದವರೆಗೂ ಮೋಸ ಮಾಡಿರುತ್ತಾರೆ.

ಮಾನಸಿಕ ವಾಗಿ ಜರ್ಜರಿತ ರಾಗಿದ್ದ ಚಂದ್ರಣ್ಣನ ಪರಿಸ್ಥಿತಿ ಮಾತ್ರ ಅತಂತ್ರ. ಒಂದು ಕಡೆ ಪಾಸ್ಪೋರ್ಟ್ ಕೂಡಾ ಇಲ್ಲ.ಈ ಕಡೆ ಮನೆಗೂ ಹೋಗುವಂತಿಲ್ಲ,ಏಕೆಂದರೆ  ಎಲ್ಲಾರಿಗೂ ವಿದೇಶಕ್ಕೆ ಹೋಗುವುದಾಗಿ ಹೇಳಿ ಮನೆಯವರ ಆಶಿರ್ವಾದವನ್ನು ಪಡೆದು ಬಂದೂ  ಆಗಿದೆ. ದಿಕ್ಕೆಟ್ಟು ಹೋಗಿದ್ದ ಚಂದ್ರಣ್ಣ  ಸೀದಾ ಮಂಗಳೂರಿಗೆ ಬರುತ್ತಾರೆ. 1 ವಾರ ಹೊಟೇಲ್ ನಲ್ಲಿ ತಂಗುತ್ತಾರೆ. ಆತ್ಮಹತ್ಯೆ ಕಡೆ ಶರಣಾಗಲು ಯೋಚಿಸಿದ್ದ ಚಂದ್ರಣ್ಣ ಮನಸ್ಸು ಗಟ್ಟಿ ಮಾಡಿಕೊಂಡು ಮಂಗಳೂರಿನ ಟೌನ್ ಹಾಲ್ ಬಳಿಯಿರುವ ಪಾರ್ಕ್ ನಲ್ಲಿ ಕುಳಿತು ಕಣ್ಣೀರಿಡುತ್ತಾ ದಿಕ್ಕೇ ತೋಚದೇ ಇದ್ದ  ಚಂದ್ರಣ್ಣ  ತನ್ನ ಆಪ್ತ ಸ್ನೇಹಿತ ಗುರುಪ್ರಸಾದ್ ಪದವಿನಂಗಡಿ ಎಂಬಾತನಿಗೆ  ಕರೆ ಮಾಡಿ ತನಗಾದ ಎಲ್ಲಾ ಪರಿಸ್ಥಿತಿಯನ್ನು ವಿವರಿಸುತ್ತಾರೆ. ತಕ್ಷಣ ಬೈಕ್ ಚಲಾಯಿಸಿಕೊಂಡು ಬಂದ ಗುರು ಚಂದ್ರಣ್ಣನನ್ನು  ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಬಾಲ್ಯದಿಂದಲೂ ಚಂದ್ರಣ್ಣನನ್ನು  ಮಗನಂತೆ ನೋಡಿಕೊಳ್ಳುತ್ತಿದ್ದ ಗುರುನ ಮನೆಯವರು ಚಂದ್ರಣ್ಣನನ್ನು ಸಾಂತ್ವನಿಸಿ ಕೈ ಹಿಡಿಯುತ್ತಾರೆ. ಸುಮಾರು ಒಂದು ತಿಂಗಳು ಚಂದ್ರಣ್ಣ ಗುರುಪ್ರಸಾದ್ ನ ಮನೆಯಲ್ಲಿಯೇ ಕಳೆಯುತ್ತಾರೆ.

ಆದರೆ ಛಲ ಬಿಡದ ಚಂದ್ರಣ್ಣ ಮತ್ತೊಮ್ಮೆ ಪಾಸ್ಪೋರ್ಟ್ ಮಾಡಿಸಲು  ಹಣವಿಲ್ಲದೇ  ಉದ್ಯೋಗದ  ಹುಡುಕಾಟದಲ್ಲಿದ್ದಾಗ  ಸ್ನೇಹಿತರೊಬ್ಬರು  ಚಂದ್ರಣ್ಣನಿಗೆ ಕರೆಮಾಡಿ ಮಂಗಳೂರಿನ ಪಬ್  ಒಂದರಲ್ಲಿ ಸೂಪರ್ ವೈಸರ್ ಕೆಲಸ ಖಾಲಿ ಇರುವ ಬಗ್ಗೆ ತಿಳಿಸುತ್ತಾರೆ. ಆದರೆ ಕೆಲಸಕ್ಕೆ ಸೇರಿದ ಒಂದು ತಿಂಗಳಿಗೆ ಸರಿಯಾಗಿ  ಪಬ್ ಮೇಲೆ ದಾಳಿ ನಡೆಯಿತು. ಚಂದ್ರಣ್ಣ ನ ಕೆಲಸವೂ ಹೋಯಿತು. ಮೊದಲೇ ಮಾನಸಿಕವಾಗಿ ಜರ್ಜರಿತನಾಗಿದ್ದ ಚಂದ್ರಣ್ಣನಿಗೆ ಗಾಯದ  ಮೇಲೆ  ಬರೆ ಎಳೆದಂತಾಯಿತು.
                                                                                                    
ಮಾನಸಿಕವಾಗಿ ಮತ್ತು ಅಸಹಾಯಕ ಸ್ಥಿತಿಯಲ್ಲಿ ನೋವಿನ ಮೇಲೆ ನೋವು ತಿಂದ   ಚಂದ್ರಣ್ಣ ನ ಪಾಲಿಗೆ ಕೊನೆಗೂ ದೇವರ ರೂಪದಲ್ಲಿ ಪ್ರತ್ಯಕ್ಷ ರಾದ ರೋಷನ್ ತೊಕ್ಕೊಟ್ಟು.


ಕೆಲಸ ಕಳೆದುಕೊಂಡ ಚಂದ್ರಣ್ಣನನ್ನು ಸಂತೈಸಿದ ರೋಷನ್ ತೊಕ್ಕೊಟ್ಟು ಚಂದ್ರಣ್ಣನಿಗೊಂದು ಸಲಹೆ ನೀಡುತ್ತಾರೆ.ವಿದೇಶಗಳ ಹೆಸರಲ್ಲಿ ಕೇಳುವಾಗಲೇ ಒಮ್ಮೆ ಹೆದರಿ ಬೆಚ್ಚಿ ಬೀಳುವ  ದೇಶವೆಂದರೆ ಅದು ದೂರದ  ಅಫ್ಘಾನಿಸ್ಥಾನ. ಇಲ್ಲಿ  ಕೆಲಸಕ್ಕೆ ಹೋಗುತ್ತಿಯ ಎಂದು.


ಚಂದ್ರಣ್ಣನಿಗೆ ಒಂದು ಕ್ಷಣ ಭೂಮಿಯೇ ಬಾಯ್ಬಿಟ್ಟಂತಹ ಅನುಭವವಾಯಿತು. ಯಾಕೆಂದರೆ ಟಿ. ವಿ ಮತ್ತು ಪತ್ರಿಕೆಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳಿಂದ ನಡೆಯುವ  ಕ್ರೂರ ಕೃತ್ಯಗಳು,ಬಾಂಬ್ ಬ್ಲಾಸ್ಟ್ಗಳು ಇನ್ನಿತರ ಹಲವಾರು ವಿಷಯಗಳನ್ನು  ತಿಳಿದಿದ್ದ ಚಂದ್ರಣ್ಣ ಮನೆಯಲ್ಲಿ ಸ್ನೇಹಿತರಲ್ಲಿ ಈ ಮಾತನ್ನು ಹೇಳಿದಾಗ ಅಫ್ಘಾನಿಸ್ತಾನಗ್ ದಾಯೆ “ಸೈಯ್ಯರೆ  ಪೋಪನ ಮಾರಾಯಾ” ಎಂದು ಗದರಿದರು.

ಆದರೆ ಕಷ್ಟದ ಕಹಿ ಉಂಡವನಿಗೆ ಭಯ ಎಂಬುದು ಬಹಳ ಕಡಿಮೆ.ಒಂದು ಕಡೆ ಸಾಲು- ಸಾಲಾಗಿ ಕೆಲಸವನ್ನು ಕಳೆದುಕೊಂಡದ್ದು ಜೊತೆಗೆ ಮೈತುಂಬಾ ಸಾಲ,ಮನೆಯ ಬಡತನ, ತಾಯಿಯ ಕನಸು,ಅಕ್ಕ ತಂಗಿಯರಿಗೆ ಮದುವೆ ಮಾಡಬೇಕೆನ್ನುವ  ಜವಾಬ್ದಾರಿ ಇವೆಲ್ಲದರ ಎದುರಿಗೆ ಚಂದ್ರಣ್ಣನಿಗೆ ಅಫ್ಘಾನಿಸ್ಥಾನ ದಲ್ಲಿ ನಡೆಯುತ್ತಿರುವ ಕ್ರೂರ ಕೃತ್ಯಗಳ ವಿಚಾರ ತುಂಬಾ ಸಣ್ಣದೆನಿಸಿತು.

2009 ಎಪ್ರಿಲ್ 22 ಚಂದ್ರಣ್ಣನ ಬಾಳಿನಲ್ಲಿ ಬಹು ದೊಡ್ಡ ನಿರ್ಧಾರ.
ನೂರಾರು ಕನಸುಗಳನ್ನು ಹೆಗಲ ಮೇಲೆ  ಹೊತ್ತು ಚಂದ್ರಣ್ಣ ಅಫ್ಘಾನಿಸ್ಥಾನಕ್ಕೇ ಹೊರಟೇ ಬಿಟ್ಟರು.ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಮಾತಿನಂತೆ ಅಫ್ಘಾನಿಸ್ಥಾನದ ಜೀವನ ಚಂದ್ರಣ್ಣನಿಗೆ ಉಸಿರು ಕಟ್ಟಿದ ಅನುಭವ  ಆದರೂ ಚಂದ್ರಣ್ಣನಿಗೊಂದು ಸಾಧಿಸಬೇಕೆಂಬ ಛಲ ಇತ್ತು.ಸಮುದ್ರಕ್ಕೆ ಇಳಿದಾಗಿದೆ ಈಜಿಯೇ ಬಿಡೋಣವೆಂದು ದಿಟ್ಟ ಯೋಚನೆಯನ್ನು ಮಾಡುತ್ತಾರೆ.ಗಟ್ಟಿ ಮನಸ್ಸು ಮಾಡಿದ ಚಂದ್ರಣ್ಣ ತನ್ನ ಕಾರ್ಯದಲ್ಲಿ ಮಗ್ನರಾಗುತ್ತಾರೆ.


ತನ್ನ ರಜೆಯ ಅವಧಿ ಮುಗಿದಿದ್ದರೂ ಚಂದ್ರಣ್ಣ ಊರಿಗೆ ಬರುವಂತಿಲ್ಲ.ಯಾಕೆಂದರೆ ಮೈ ತುಂಬಾ ಸಾಲ. ತನಗೆ ಏಳು ಲಕ್ಷ ಮೋಸ ಹೋಗಿದ್ದರೂ  ಕಷ್ಟ ಕಾಲದಲ್ಲಿ ಕೊಟ್ಟಿದ್ದ ಎಲ್ಲಾ ಸ್ನೇಹಿತರ, ಸಂಬಂಧಿಕರ  ಸಾಲವನ್ನೆಲ್ಲಾ ದುಡಿದು ಚಂದ್ರಣ್ಣ ತನ್ನ ಸಾಲವನ್ನೆಲ್ಲಾ ಪ್ರಾಮಾಣಿಕವಾಗಿ ತೀರಿಸುತ್ತಾ ಬರುತ್ತಾರೆ.ಸಾಲ ಕೊಟ್ಟವರ ಮನದಲ್ಲಿ ನಮ್ರತೆಯ ಗೌರವ.ಯಾಕೆಂದರೆ ಇಷ್ಟು ದೊಡ್ಡ ಮೊತ್ತದ  ಮೋಸ ಹೋಗಿದ್ದರೂ ಚಂದ್ರಣ್ಣ ಮಾತ್ರ ಯಾರಿಗೂ ಮೋಸ ಮಾಡದೆ  ಸಾಲ ಪಡೆದ ಎಲ್ಲರ ಸಾಲವನ್ನು ತೀರಿಸಿದ್ದು.


ಚಂದ್ರಣ್ಣನ ಕಷ್ದ ದಿನಗಳು ಬಹುತೇಕ ದೂರವಾಗುತ್ತಾ ಬಂದಿತು. ಕಷ್ಟ ಪಟ್ಟು  ದುಡಿದು ತನ್ನೊಬ್ಬ  ಅಕ್ಕ ಹಾಗೂ ನಾಲ್ವರು ತಂಗಿಯಂದಿರ ಮದುವೆ ಮಾಡಿ ಮುಗಿಸುತ್ತಾರೆ.ಅಲ್ಲದೇ ಸಮಾಜದಲ್ಲಿ ಆಡಂಬರ ದ ಮದುವೆ ಕಾರ್ಯಗಳನ್ನು ನೋಡುತ್ತಾ ಇದ್ದ ಚಂದ್ರಣ್ಣ  ತಂಗಿಯ ಮದುವೆ ಸಂದರ್ಭದಲ್ಲಿ ದುಂದು ವೆಚ್ಚದ ಮೆಹೆಂದಿ ಗೆ ಕಡಿವಾಣ ಹಾಕಿ ವಿಶ್ವ ಮಾತೇ ಭಾರತಿ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ  ಹಲವಾರು ಸೇವಾ ತಂಡಗಳನ್ನು ಗುರುತಿಸಿ ಗೌರವಾರ್ಪಣೆ ಮತ್ತು ಅತೀ ಕಡು  ಬಡತನದ ಕುಟುಂಬದ ಮಕ್ಕಳನ್ನು ಗುರುತಿಸಿ ಅವರಿಗೆ ವಿದ್ಯಾಭ್ಯಾಸಕ್ಕೆ  ಪ್ರೋತ್ಸಾಹ ಧನ,ಪುಸ್ತಕ, ಬ್ಯಾಗ್ ವಿತರಿಸಿ ತನ್ನ  ಸರಳತೆ ಹಾಗೂ ಔದಾರ್ಯತೆಯನ್ನು ಮೆರೆಯುತ್ತಾರೆ.


ಆದರೆ ಚಂದ್ರಣ್ಣ ಗುರಿ ಉದ್ದೇಶ ಈಡೇರಿಲ್ಲ. ಯಾಕೆಂದರೆ  ಚಿಕ್ಕಂದಿನಿಂದಲೂ ಬಡತನದ ಬೇಗೆಯಲ್ಲಿ ನೊಂದ ಜೀವ,ತಾಯಿಯ ಬೀಡಿ ಚೀಲ ದಿಂದ ತುಂಬುತ್ತಿದ್ದ ಅವರ ಹೊಟ್ಟೆ ಅತೀ ಚಿಕ್ಕ ವಯಸ್ಸಿನಲ್ಲಿ ಸಿಕ್ಕ ಬಡತನ ಎನ್ನುವ ಪೆಟ್ಟು ಇದೆಲ್ಲವೂ ಮನದಲ್ಲಿ ಭದ್ರವಾಗಿ ಬೇರೂರಿತ್ತು.ಹೀಗಿರುವಾಗ ನೊಂದವರಿಗೆ ಆಸರೆಯಾಗಬೇಕೆನ್ನುವ ಹಂಬಲ ಸಹಜವಾಗಿಯೆ ಇರುತ್ತದೆ ಬಿಡಿ.

ಚಂದ್ರಣ್ಣನ ಬಹುತೇಕ ಜವಬ್ದಾರಿ ಮುಗೀತು ಅಂದು ಕೊಂಡರೆ ಅದು ನಿಮ್ಮ ತಪ್ಪು ಯಾಕೆಂದರೆ ನಿಜವಾದ ಜವಬ್ಧಾರಿ ಪ್ರಾರಂಭವಾಗುವುದೇ ಇನ್ನು ಮುಂದೆ. ತನ್ನ ಕೆಲಸ ಮುಗಿದ ಮೇಲೆ ಚಂದ್ರಣ್ಣನಿಗೆ  ತಾನು ಮಾಡಬೇಕಾದ ಕರ್ತವ್ಯ ನೆನಪಾಗುತ್ತದೆ.

2016 ರಲ್ಲಿ ಚಂದ್ರಣ್ಣನ ಕನಸುಗಳಿಗೆ ಚಾಲನೆ ಸಿಗುತ್ತದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ವಾಕ್ಯದಡಿಯಲ್ಲಿ ಮಾತೃಭೂಮಿ ಸೇವಾ ಫೌಂಡೇಶನ್ ಇದರ ಮಂಗಳೂರು ಘಟಕ ಸ್ಥಾಪಿಸಿ  ಕಾರ್ಣಿಯ ಮುಕ್ತ ಭಾರತ, ವಿದ್ಯಾಭ್ಯಾಸ ಕ್ಕೆ ನೆರವು,ವೈದ್ಯಕೀಯ ನೆರವು ಇನ್ನಿತರ ಹಲವಾರು ಸೇವಾ ಕಾರ್ಯ ಗಳಲ್ಲಿ  ಮಗ್ನರಾಗುತ್ತಾರೆ.


ಮೊದಲು ನಮ್ಮ ಊರು,ಗ್ರಾಮ ನಾವು ವಾಸಿಸುವ ಸುತ್ತ ಮುತ್ತ ಇರುವ ಅಶಕ್ತರ ಕಣ್ಣೀರೊರೆಸಬೇಕೆಂಬ ಛಲ ತೊಟ್ಟ ಚಂದ್ರಣ್ಣನ ಆಸೆಯಂತೆ  2017 ಜೂನ್ 19 ಪುಣ್ಯಭೂಮಿ ತುಳುನಾಡ ಸೇವಾ ಫೌಂಡೇಶನ್ ಉಗಮವಾಗುತ್ತದೆ. ನಂತರ ವಿಶ್ವ ಬಿಲ್ಲವರ ಸೇವಾ ಚಾವಡಿ,ಸೇವಾ ಸಂಸ್ಥೆಗಳ ಮಹಾ ಸಂಗಮ, ಬಿಲ್ಲವ ಸೇವಾ ಮಾಣಿಕ್ಯದಾತರ ಸಮಾಗಮ ಹೀಗೆ  ಹಲವಾರು  ಸಂಘಟನೆಗಳ ಸಂಸ್ಥಾಪಕ ರಾಗಿ ಮತ್ತು ಇನ್ನಿತರ ಹಲವಾರು ಸಂಸ್ಥೆಗಳ ಸಕ್ರಿಯವಾಗಿ ಸದಸ್ಯನಾಗಿ ತೊಡಗಿಸಿಕೊಳ್ಳುತ್ತಾ ತಾನು ದುಡಿದ ಒಂದು ಪಾಲು ಹಣವನ್ನು ಸಮಾಜಸೇವೆಗಾಗಿಯೇ ಮೀಸಲಿಟ್ಟು ಅನೇಕ ಸೇವಾ ಸಂಸ್ಥೆಗಳಿಗೆ  ಮಾತೃಸ್ಥಾನವನ್ನು ತುಂಬುತ್ತಿರುವವರು ಚಂದ್ರಣ್ಣ.

ಹೌದು ಇಷ್ಟೆಲ್ಲ  ನಿಸ್ವಾರ್ಥ ಸೇವಾ ಸಂಸ್ಥೆಗಳು ಯಶಸ್ವಿಯ ದಾರಿಯಲ್ಲಿ ಸಾಗುತ್ತಿದ್ದರೆ  ಕಾಲೆಲೆಯುವ ಹಿತ ಶತ್ರುಗಳ ಅವಮಾನಗಳನ್ನೇ ಸನ್ಮಾನ ವನ್ನಾಗಿಸಿ ತಾಳ್ಮೆಯಿಂದ  ಮುನ್ನಡೆದವರು ನಮ್ಮ ಚಂದ್ರಣ್ಣ.


 ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾ ಇತರರನ್ನೂ ಹುರಿದುಂಬಿಸುತ್ತಾ ಕೆಲಸ ಮಾಡುವ ಚಂದ್ರಣ್ಣ ಹಲವಾರು ನಿಸ್ವಾರ್ಥ ಸೇವಾ ಸೇನಾನಿಗಳ ಸಹಕಾರ ದಿಂದ ಸುಮಾರು 50 ಲಕ್ಷಕ್ಕೂ ಮಿಗಿಲಾದ ಸೇವೆಯನ್ನು ಅಶಕ್ತರ ಪಾಲಿಗೆ ನೀಡಿದ್ದಾರೆ.

ಇವತ್ತು  ಅದೆಷ್ಟೋ ಯುವಕರು ಆಫ್ಘಾನಿಸ್ಥಾನದಲ್ಲಿ ದುಡಿಯುತ್ತಿದ್ದಾರೆ ಎಂದರೆ ಅದಕ್ಕೆ ಚಂದ್ರಣ್ಣ ಕಾರಣ.ಹೊಸ ಹೊಸ ಸಮಾಜಸೇವಕರನ್ನು  ಸಮಾಜಕ್ಕೆ ಪರಿಚಯಿಸುತ್ತಿದ್ದಾರೆ ಎಂದರೆ ಅದರಲ್ಲಿ ಮೊದಲಿಗರು ಚಂದ್ರಣ್ಣ.

ಇದೇ ರೀತಿ ಬದುಕಬೇಕು ಎಂದು ಚಂದ್ರಣ್ಣ ‘ಆರ್ಡರ್’ ಮಾಡಿದವರಲ್ಲ ಬದಲಾಗಿ ಸರಳವಾಗಿ  ತಾನು ಅದೇ ರೀತಿ ಬದುಕಿ ತೋರಿಸುತ್ತಾರೆ.
ಆದರೆ ಚಂದ್ರಣ್ಣನ ಕನಸುಗಳು ಇಂದಿಗೂ ಈಡೇರಿಲ್ಲ.ಅವರಿಗೊಂದಷ್ಟು ಆಸೆಗಳಿಲ್ಲದಿದ್ದರೂ ಆಕಾಂಕ್ಷೆಗಳಿವೆ.


ರಾಜಕೀಯ ರಹಿತವಾಗಿ ಯುವ ಜನಾಂಗವನ್ನು ಒಂದುಗೂಡಿಸಿ ಜಾತಿ ಮತ ಬೇಧಗಳನ್ನು ಬದಿಗಿಟ್ಟು ಸಾಮರಸ್ಯದ ಪುಣ್ಯಭೂಮಿಯನ್ನು ಕಟ್ಟಬೇಕೆಂಬ ಮಹದಾಸೆ. ಯಾಕೆಂದರೆ ಚಂದ್ರಣ್ಣಿಗೆ ಆದರ್ಶರಾಗಿರುವವರು ಸಾಕ್ಷಾತ್ ಬ್ರಹ್ಮಶ್ರೀ ನಾರಾಯಣಗುರುಗಳು. ಗುರುಗಳ ಕಲ್ಪನೆಯಂತೆ ಅಶಕ್ತರನ್ನು ಸಶಕ್ತರನ್ನಾಗಿಸಿ ಸದೃಢ ಸುಂದರ ಸಮಾಜವನ್ನು ನಿರ್ಮಿಸುವ ಬಯಕೆಯಿದೆ.

ಚಂದ್ರಣ್ಣನ ಹೆಗಲಿಗೆ ಹೆಗಲು ಕೊಟ್ಟು ನಾವೂ  ಚಂದ್ರಣ್ಣನೊಂದಿಗೆ ಮುಂದೆ ಸಾಗೋಣ ಎನ್ನುವ ಆಶಯದೊಂದಿಗೆ ಈ ಅಂಕಣವನ್ನು ಮುಗಿಸುತ್ತಿದ್ದೇನೆ ಎಲ್ಲರಿಗೂ ಧನ್ಯವಾದಗಳು.

ಪ್ರಶಾಂತ್ ಮುಡಾರು        
-8296141639


ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
 ಜಾಹೀರಾತು
 ಜಾಹೀರಾತು
 ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget