ಮಕಾಡೆ ಮಲಗುತ್ತಿದೆ ಹೊಟೆಲ್ ಉದ್ಯಮ ದಿಕ್ಕೆಲ್ಲಿ? ದೆಸೆಯೆಲ್ಲಿ? ಆತಂಕದಲ್ಲಿದೆ ಅನ್ನದಾತರ ಬದುಕು -ವಸಂತ್ ಗಿಳಿಯಾರ್

ಮಕಾಡೆ ಮಲಗುತ್ತಿದೆ ಹೊಟೆಲ್ ಉದ್ಯಮ ದಿಕ್ಕೆಲ್ಲಿ? ದೆಸೆಯೆಲ್ಲಿ? ಆತಂಕದಲ್ಲಿದೆ ಅನ್ನದಾತರ ಬದುಕು
-ವಸಂತ್ ಗಿಳಿಯಾರ್

ನಮ್ಮ ಊರು ಬೆಳೆದದ್ದು, ಇಲ್ಲಿನ ದೈವಗಳ ಮನೆಯ ಮೇಲೆ ಹೊಸ ಹೆಂಚು, ಕೊನೆಗೆ ಟೆರೇಸು ಕಂಡದ್ದು, ನಮ್ಮ ಊರ ದೇವಸ್ಥಾನಗಳ ಪ್ರಾಂಗಣಗಳು ಶಿಲಾಮಯವಾಗಿ ತಂಪಾದದ್ದು ದೇವಳದ ಮಾಡಿಗೆ ಹಿತ್ತಾಳೆ, ತಾಮ್ರಗಳ ಹೊಡೆಸಿ ಮೆರುಗು ಕೊಟ್ಟಿದ್ದು, ದೇವರ ಮೈಮೇಲೆ ತರಹಾವರಿ ಆಭರಣಗಳು ಮಿನುಗಿದ್ದು, ಊರೂರುಗಳಲ್ಲಿಯೂ ನಾಗಮಂಡಲವಾದದ್ದು, ಹರಕೆಯಾಟದ ಹೆಸರಲ್ಲಿ ಕಲಾವಿದರ ಬದುಕು ನಕ್ಕಿದ್ದು, ಕೋಲ ಕಟ್ಟುವ ಪಾಣಾರನ ಮಕ್ಕಳೂ ಕಾಲೇಜು ಮೆಟ್ಟಿಲು ಹತ್ತಿ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ್ದು ಹೀಗೆ ನಮ್ಮ ಕರಾವಳಿ ಒಟ್ಟಾರೆಯಾಗಿ ಬೆಳೆದದ್ದು ಅನ್ನದಾತರ ಕರುಣೆಯಿಂದ ಅರ್ಥಾತ್ ಹೊಟೇಲು ಉದ್ಯಮದಿಂದ. ಊರು ಬಿಟ್ಟು ನಗರ ಸೇರಿ ಹೋಟೇಲುಗಳಲ್ಲಿ ದುಡಿದು ಹೊಟೇಲು ಕಟ್ಟಿದ ಅವರು ಊರಿನ ಕಾಗದ ತಲುಪಿದಾಗಲೆಲ್ಲಾ ಹಣವನ್ನ ಮನಿಯಾರ್ಡರ್ ಮಾಡಿದರು. ತಂಗಿಯರ, ಅಕ್ಕಂದಿರ ಮದುವೆ ಮಾಡಿಸಿ ತಾವು ಮದುವೆಯಾಗುವಾಗ ಪ್ರಾಯವಾದರೂ ಊರಲ್ಲಿ ಅವರೆಲ್ಲ ನೆಮ್ಮದಿಯಾದರಲ್ಲ ಎಂದು ನಿಟ್ಟುಸಿರು ಬಿಟ್ಟರು. ಮಾರಾಟದ ಬಿಚ್ಚಾಳಿ ಹಾಕಿಕೊಂಡೇ ಬದುಕಿಡೀ ಬದುಕಿದ ಅಬ್ಬಿಯ ಕೊರಳಿಗೊಂದು ಬಂಗಾರದ ಕರಿಮಣಿ ಸರ ಮಾಡಿಸಿಕೊಟ್ಟಾಗ ಅಬ್ಬಿಯ ಕಣ್ಣಲ್ಲಿ ಕಂಡ ಸಾರ್ಥಕತೆಯ ಕಣ್ಣೀರಿಗೆ ಅವರೂ ಭಾವುಕರಾದರು.

 ಅಕ್ಕ ತಂಗಿ, ಅಮ್ಮಂದಿರ ಬಳೆಯಂಗಡಿಯ ಮಣ್ಣಿನ ಗಚ್ಚಿನ ಬಳೆಯ ನಡುವೆ ಚಿನ್ನದ ಬಳೆಗಳು ಮಿನುಗಿದಾಗ ಎದೆಯುಬ್ಬಿಸಿ ಹೇಳಿಕೊಂಡರು ’ನಾವೀಗ ಅನುಕೂಲ!’ ಹುಲ್ಲು ಮಾಡಿನ, ತೆಂಗಿನ ಜಿಡಕಿಯ ಮನೆಗಳು, ಮಣ್ಣಿನ ಗೋಡೆಯ ಮನೆಗಳಿದ್ದ ಜಾಗದಲ್ಲಿ ಟೆರೇಸಿನ ಮನೆಗಳು ಎದ್ದು ನಿಂತವು. ಸೈಕಲ್ಲುಗಳು ತುಕ್ಕು ಹಿಡಿದು ತೆಂಗಿನ ಗಿಡಕ್ಕೆ ಆನಿಕೊಂಡು ನಿಂತವು ಈಗೇನಿದ್ದರೂ ಮನೆ ಮನೆಗಳಲ್ಲಿ ಸ್ಕೂಟರು, ಕಾರುಗಳಿವೆ! ಊರ ಮಕ್ಕಳು ಅವರ ಸಂಪಾದನೆಯಲ್ಲೇ ಒಳ್ಳೆಯ ಶಿಕ್ಷಣ ಪಡೆದರು. ಇಲ್ಲಿನ ಬದುಕು ಬದಲಾಯಿತು, ಅದೆಲ್ಲದಕ್ಕೂ ಅವರು ಪ್ರಮುಖ ಕಾರಣ! ಮಿಕ್ಕ ಬೇರೆ ನೂರು ಕಾರಣವಿದ್ದೀತು! ಆದರೆ ಮುಖ್ಯ ಕಾರಣ ಅವರೇ. ಮುಂಬೈ, ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಎಂದೆಲ್ಲ ನಗರಗಳಲ್ಲಿ ಹೊಟೇಲು ತೆರೆದು, ಬೇಕರಿ ಮಾಡಿ ಹಗಲು ರಾತ್ರಿಗಳ ಪರಿವೆ ಇಲ್ಲದೆ ಅಲ್ಲೆಂದೂ ಶೋಕಿಗೆ ಬೀಳದೆ ಪೈಸೆ ಪೈಸೆ ಒಟ್ಟು ಮಾಡಿ ಊರ ಕಟ್ಟಿದ ವೀರರವರು. ಇಂದು ಅವರ ಬದುಕು ಸವಾಲಿನ ಅಂಚಿಗೆ ಬಂದು ನಿಂತಿದೆ! ಸೋಲಿನ ಗೆರೆಯ ನಡುವೆಯಿದೆ!
ಹೌದು. ಹೋಟೇಲ್ ಉದ್ಯಮ ಇಂದು ಸವಾಲಿನ ನಡುವಿದೆ. ಕೋಟಿ ಕೋಟಿ ಸುರಿದು ಹೊಟೇಲು ಮಾಡಿದರೆ ಅದೆಲ್ಲವೂ ಅವರ ದುಡಿಮೆಯ ಹಣವಲ್ಲ! ಕೋಟಿ ಕೋಟಿ ಸಾಲವೂ ಇರುತ್ತದೆ. ಐದಾರು ಚೀಟಿ ಹಾಕಿ ಲಕ್ಷಾಂತರ ರೂಪಾಯಿ ಫಂಡ್ ಎತ್ತಿ ಹೋಟೇಲು ಮಾಡಿಕೊಂಡವರಿದ್ದಾರೆ! ಹೆಂಡತಿಯ ಬಂಗಾರ ಗಿರವಿ ಇಟ್ಟು ಚಿನ್ನವೆಲ್ಲಾ ಲಾಕರ್ ಅಲ್ಲಿ ಸೇಫ್ ಆಗಿದೆ ಎಂದು ಊರವರಿಗೆ ಹೇಳಿ ನಕ್ಕು ಬೇಕರಿಯನ್ನೋ ,ಕಾಂಡಿಮೆಂಟ್ಸ್ ಅನ್ನೋ ಮಾಡಿಕೊಂಡವರ ಬದುಕು ಕೊರೋನಾದ ಧಾಳಿಯಲ್ಲಿ ಡೋಲಾಯಮಾನವಾಗಿದೆ. ಎರಡು ಮೂರು ತಿಂಗಳಿಂದ ವ್ಯವಹಾರ ಶಟರ್ ಎಳೆದುಕೊಂಡಿದೆ ಆದರೆ ಬಾಡಿಗೆ ಲಕ್ಷ ಲಕ್ಷ ಯಥಾವತ್ತು ಕಟ್ಟಲೇ ಬೇಕಿದೆ. ಚೀಟಿ ದುಡ್ಡು ಕಟ್ಟದೆ ಎಷ್ಟು ದಿನ ಇರಬಹುದು ಹೇಳಿ? ಬ್ಯಾಂಕ್ ಲೋನಿನ ಕಂತುಗಳು ಕಟ್ಟದಿದ್ದರೆ ಬಡ್ಡಿ ನಿಲ್ಲುತ್ತದಾ? ಹೊಟೇಲು ಮಾಡುವಾಗ, ಲಕ್ಷದಿಂದ ಕೋಟಿ ತನಕ ಸಾಲ ಮಾಡುವಾಗ ವಿಶ್ವಾಸವಿತ್ತು. ದೇವರು ನಡೆಸಿ ವ್ಯಾಪಾರವಾದರೆ ಸಾಲ ತೀರಿಸುವುದೇನು ಮಹಾ? ನಂಬಿದ ಮಾರಣ ಕಟ್ಟೆಯ ಬ್ರಹ್ಮಲಿಂಗನೋ, ಮಂದಾರ್ತಿಯ ದುರ್ಗೆಯೋ ಕಟೀಲಮ್ಮನೋ, ನಂದಿ, ಕಾಡ್ಚಿ, ಜಟ್ಟಿಗ, ಪಂಜುರ್ಲಿ, ಜುಮಾದಿಯೋ ಹೀಗೆ ದೈವ, ದೇವರು ಜೊತೆಗಿದ್ದಾರೆ ಎಂಬ ವಿಶ್ವಾಸದಲ್ಲಿ ವ್ಯಾಪಾರ ಕುದುರುತ್ತದೆ ಎಂಬ ನಂಬಿಕೆಯಲ್ಲಿದ್ದರು. ಆದರೆ ಈಗ!

ಇವತ್ತು ಬೆಂಗಳೂರಿನ ಹೋಟೆಲ್ ಉದ್ಯಮಿ, ಅಣ್ಣ ರಾಘವೇಂದ್ರ ಕಾಂಚನ್ ಸಿಕ್ಕಿದ್ದರು! ಅವರು ಕೇಳುತ್ತಾರೆ ’ಗಿಳಿಯಾರ್ ಹೀಗೆ ಮುಂದುವರಿದರೆ ಮುಂದೆ ಎಂಥ ಕಥೆ ಮಾರಾಯ?’ ಏನು ಹೇಳಲಿ ಹೇಳಿ? ಮೊನ್ನೆ ಧರ್ಮಬಂಧು ಮಾರಣಕಟ್ಟೆಯ ಕೃಷ್ಣಮೂರ್ತಿ ಮಂಜರು ಕರೆ ಮಾಡಿದವರು ಹೋಟೆಲ್ ಉದ್ಯಮದ ಕರುಣಾಜನಕ ಕಥೆ ಹೇಳಿ ಆತಂಕಿತರಾದರು! ಪತ್ರಿಕೆಯ ವರದಿಯೊಂದು ಹೇಳುತ್ತಿದೆ ಕೋವಿಡ್ ಬಿಕ್ಕಟ್ಟಿನಿಂದ ಮುಂದಿನ ಆರು ತಿಂಗಳಲ್ಲಿ ಹತ್ತರಲ್ಲಿ ನಾಲ್ಕು ಅಂದರೆ ಶೇಕಡ ನಲವತ್ತು ಪರ್ಸೆಂಟ್ ರೆಸ್ಟೋರೆಂಟ್ ಗಳು ಶಾಶ್ವತವಾಗಿ ಮುಚ್ಚಿಹೋಗಲಿವೆ! ಲಾಕ್ ಡೌನ್ ಮೊದಲು ಹೊಟೇಲ್ ಉದ್ಯಮದ ವಹಿವಾಟು ನಾಲ್ಕು ಲಕ್ಷ ಕೋಟಿ ರೂಪಾಯಿ ಇತ್ತು ಅದು ಅಂದಾಜು ಎಪ್ಪತ್ತು ಲಕ್ಷ ಜನರಿಗೆ ನೇರವಾಗಿ ಕೊಟ್ಟಿತ್ತು. ಹೊಟೇಲ್ ಉದ್ಯಮವನ್ನ ನೆಚ್ಚಿಕೊಂಡ ಉಪ ಉದ್ಯಮದಲ್ಲಿರುವವರು ಕೋಟ್ಯಾಂತರ ಮಂದಿ! ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಶನ್ ಆಪ್ ಇಂಡಿಯಾದ ಪ್ರಕಾರ ಫುಡ್ ಇಂಡಸ್ಟ್ರಿ ವಹಿವಾಟು, ಫುಡ್ ವಿತರಣೆ ಶೇಕಡ ಎಪ್ಪತ್ತರಷ್ಟು ಕುಸಿತ ಕಾಣುವ ಸಾಧ್ಯತೆಗಳಿವೆ! ಆಗ ಏನು ಮಾಡುವುದು ನೀವೇ ಹೇಳಿ? ನಾವು ಕರಾವಳಿಯವರು ಹೊಟೇಲ್ ಉದ್ಯಮದಿಂದಲೇ ದೊಡ್ಡ ಮಟ್ಟದಲ್ಲಿ ಬದುಕು ಕಟ್ಟಿಕೊಂಡವರು ಇದೊಂದನ್ನ ಯೋಚಿಸಿದರೆ ಆತಂಕಿತರಾಗುತ್ತಿದ್ದೇವೆ! ಮೂರನೆ ಮಹಾಯುದ್ದವಾದರೆ ಏನು ನಷ್ಟವಾಗ ಬಹುದು ಎಂದು ಅಂದಾಜಿಸಬಹುದೋ ಅದಕ್ಕಿಂತಲೂ ಬಹುಪಟ್ಟಿನಲ್ಲಿ ವಿಶ್ವ ಆರ್ಥಿಕವಾಗಿ ಕಂಪಿಸಿ, ಕನಲಿ ಹಿಂದೆ ಸರಿದು ಬಿಟ್ಟಿದೆ!
ದಿಕ್ಕಾರು? ದೆಸೆಯಾರು? ಆ ಧರ್ಮ ರಕ್ಷಕ ಸತ್ಯ ದೇವತೆಗಳೇ ಹೇಳಬೇಕು. ಇದು ಬದುಕು ಹೊಸ ಹೊರಳಿಗೆ ಹೊರಳುತ್ತಿರುವ ಸಮಯ! ಬಿದ್ದಿದ್ದೇವೆ, ಬೀಳುತ್ತಿದ್ದೇವೆ. ಮತ್ತೆ ಬಲವಾಗಿ ಕಾಲೂರಿ ಏಳುವ ಶಕ್ತಿಕೊಡು ದೇವರೆ ಎಂದಷ್ಟೇ ಮೊರೆ ಇಡಬಹುದು ಅಲ್ಲವೆ?


ಜಾಹೀರಾತು
ಜಾಹೀರಾತು
 ಜಾಹೀರಾತು
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget