ಕಾರ್ಕಳ ಶಾಸಕರಾದ ಸುನೀಲ್ ಕುಮಾರ್ ನೇತೃತ್ವದಲ್ಲಿ ತಾಲೂಕಿನಾದ್ಯಂತ ಕಷಾಯ ವಿತರಣೆ ಆರಂಭಿಸಲಾಗಿದೆ. ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚು ಜನ ಹೊರ ರಾಜ್ಯದಿಂದ ಬಂದವರು ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಶುಂಠಿ, ಅರಿಶಿನ, ಬೆಲ್ಲ, ಏಲಕ್ಕಿ, ನಿಂಬೆ ಹಣ್ಣು ಮುಂತಾದ ದ್ರವ್ಯಗಳನ್ನು ಮಿಶ್ರಣ ಮಾಡಿ ಕಷಾಯ ತಯಾರಿಸಲಾಗುತ್ತದೆ. ಇದಕ್ಕೆ ಕರಾವಳಿಯ ಖಡಕ್ ಕಾಳುಮೆಣಸನ್ನು ಸೇರಿಸಲಾಗುತ್ತಿದೆ. ಈ ಎಲ್ಲ ದ್ರವ್ಯಗಳಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವ ಸಾಮಥ್ರ್ಯ ಇದೆ ಎಂಬುದು ಆಯುಷ್ ಇಲಾಖೆಯ ಅಭಿಪ್ರಾಯ. ಹೀಗಾಗಿ ಇದನ್ನು ಕಾರ್ಕಳದಲ್ಲಿ ಪ್ರಯೋಗಕ್ಕೆ ತರಲಾಗಿದೆ.
ಮಹಾರಾಷ್ಟ್ರ, ತೆಲಂಗಾಣ ಕೇರಳ, ತಮಿಳುನಾಡು ಸೇರಿದಂತೆ ದೇಶದ ಸುಮಾರು ಏಳೆಂಟು ರಾಜ್ಯಗಳಿಂದ ಉಡುಪಿಗೆ ವಾಪಸ್ ಆಗಿರುವವರಿಗೆ ಈ ಕಷಾಯವನ್ನು ಕೊಡಲಾಗುತ್ತಿದೆ. ಕೊರೊನಾ ಬಾರಿಸಿದವರಿಗೆ ಒಂದು ಕಡೆಯಿಂದ ಚಿಕಿತ್ಸೆ ನಡೆಯುತ್ತಿದ್ದರೆ ಕೊರೊನಾ ಬಾರದಂತೆ ತಡೆಗಟ್ಟುವುದು ಮತ್ತು ಮುನ್ನೆಚ್ಚರಿಕೆ ವಹಿಸುವ ಕೆಲಸ ಇನ್ನೊಂದು ಕಡೆಯಿಂದ ಆಗ್ತಾಯಿದೆ.
ವೈರಲ್ ಜ್ವರಗಳಿಗೆ ಆಯುರ್ವೇದದಲ್ಲಿ ಮದ್ದು ಇದೆ. ಈ ಹಿಂದೆಯೇ ಸಾಕಷ್ಟು ಬಾರಿ ಸಾಬೀತಾಗಿತ್ತು. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿಚಾರದಲ್ಲಿ ಆಯುಷ್ ಇಲಾಖೆ ಸಾಕಷ್ಟು ಸಲಹೆಗಳನ್ನು ಸರ್ಕಾರಕ್ಕೆ ಕೊಟ್ಟಿದೆ. ನಾವು ಪ್ರತಿನಿತ್ಯ ಸೇವಿಸುವ ವಸ್ತುಗಳಲ್ಲೇ ಆಯುರ್ವೇದಿಕ್ ಅಂಶಗಳು ಬೆರೆತಿರುತ್ತದೆ. ಆ ಎಲ್ಲ ವಸ್ತುಗಳನ್ನು ಸೇರಿಸಿ ಕಷಾಯ ಮಾಡಿದರೆ ಅದರ ಫಲ ಆ ವ್ಯಕ್ತಿಗಳಿಗೆ ಸಿಕ್ಕೇ ಸಿಗುತ್ತದೆ. ರೋಗ ಬಾರದಂತೆ ತಡೆಗಟ್ಟಿದರೆ ಉತ್ತಮ ಅನ್ನುವ ನಿರ್ಧಾರದಿಂದ ಕಷಾಯ ವಿತರಿಸುವ ಯೋಜನೆಯನ್ನು ರೂಪಿಸಿದ್ದೇವೆ. ಕ್ವಾರಂಟೈನ್ ಅವಧಿಯ ಉದ್ದಕ್ಕೂ ಎಲ್ಲರಿಗೂ ಈ ಕಷಾಯವನ್ನು ಕೊಡುತ್ತೇವೆ.ಕ್ವಾರಂಟೈನ್ನಲ್ಲಿ ಇರುವವರಿಗೆ ಪ್ರತಿದಿನ ಕಷಾಯ ಕೊಡುತ್ತೇವೆ. ಇದು ನಿರಂತರ ನಡೆಯಲಿದೆ. ಹೊರ ರಾಜ್ಯದಿಂದ ಬಂದ ಎಲ್ಲರಿಗೂ ನೀಡುವ ಆಲೋಚನೆ ಇದೆ. ಕಷಾಯ ತಯಾರಿಗೆ ತಜ್ಞರನ್ನು, ಬಾಣಸಿಗರನ್ನು ಶಾಸಕ ಸುನೀಲ್ ಕುಮಾರ್ ಕಚೇರಿಯಿಂದ ನೇಮಕ ಮಾಡಲಾಗಿದೆ. ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
Post a comment