ಗಂಟಲಿನ ಕ್ಯಾನ್ಸರ್ ಗೆ ಸಿಕ್ಕು ನಲುಗಿದ ಸಂಸಾರ:ನೆರವಿನ ನಿರೀಕ್ಷೆಯಲ್ಲಿದೆ ಕುಟುಂಬ-Times of karkala

ಸಮಯದ ಕೈಗೊಂಬೆಯಾದ  ಉಮೇಶ್ ಶೆಟ್ಟಿ ಪರಿವಾರದ ಕಣ್ಣೀರ ಕಥೆ, ವ್ಯಥೆ -  ಸಹಾಯಹಸ್ತದ ನಿರೀಕ್ಷೆಯಲ್ಲಿ ಅಸಹಾಯಕ ಕುಟುಂಬ-Times of karkala

ಉಮೇಶ್ ಶೆಟ್ಟಿ  ಮೂಲತ ಕುಂದಾಪುರದ ಮೊಲಹಳ್ಳಿಯವರು. ಬೆಳಗಾವಿ ಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದರು, ತಮ್ಮ  ಹೆಂಡತಿ ಗುಣವತಿ (ಕುಂದಾಪುರದ ಹೆಂಗವಳ್ಳಿಯವರು) ಮಗ ನಿತೇಶ್ (19ವರ್ಷ)  ಮಗಳು ನಿರೀಕ್ಷಾ ( 16 ವರ್ಷ ) ಪುಟ್ಟ ಸಂಸಾರದೊಂದಿಗೆ ನೆಮ್ಮದಿಯ ಜೀವನ ಸಾಗಿಸುತಿದ್ದರು.

ಇವರ ಸುಂದರ ಸಂಸಾರಕ್ಕೆ ಶನಿಯ ವಕ್ರದೃಷ್ಟಿ ಬಿತ್ತೋ ಏನೋ. 8 ವರ್ಷಗಳ ಹಿಂದೆ ಅಸೌಖ್ಯಗೊಂಡ ಉಮೇಶ್ ಅವರನ್ನು  ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ಬಂದ ಮೆಡಿಕಲ್ ರಿಪೋರ್ಟ್ ಈ ಪರಿವಾರದ ಸುಂದರ  ಬದುಕಿನಲ್ಲಿ ಮುಂದಿನ ದಿನಗಳಲ್ಲಿ ಬರಬಹುದಾದ ಬಿರುಗಾಳಿಯ ಮುನ್ಸೂಚನೆಯೋ ಎಂಬಂತೆ, ಉಮೇಶ್ ಶೆಟ್ಟಿ ಅವರಿಗೆ ಗಂಟಲಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು.  ಅಲ್ಲಿಂದ ಇವರ ಕುಟಂಬದ ನೆಮ್ಮದಿಯ ಸಂಸಾರ ನೌಕೆ  ಚಂಡಮಾರುತಕ್ಕೆ ಸಿಕ್ಕ ಹಡಗಿನಂತಾಯಿತು.

 ಕುಟುಂಬದ ಯಜಮಾನನ್ನು ಗುಣಪಡಿಸಲು ಚಿಕಿತ್ಸೆಗೆ ಬೆಳಗಾವಿಯ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸಿ ಲಕ್ಷಾಂತರ ಖರ್ಚು ಮಾಡಿಯೂ ಆಯಿತು. ಈ ಪ್ರಯತ್ನದಲ್ಲಿ ಹೋಟೆಲ್, ಮನೆ ಎಲ್ಲವನ್ನೂ ಕಳೆದುಕೊಂಡು ಈ ಕುಟುಂಬ ಬೀದಿ ಪಾಲಾದರೂ, ಉಮೇಶ್ ಶೆಟ್ಟಿಯವರ ಆರೋಗ್ಯ ಸುಧಾರಿಸಲಿಲ್ಲ.   3 ವರ್ಷಗಳ ಹಿಂದೆ ಧಾರವಾಡಕ್ಕೆ ಬಂದು , ತಿಂಗಳಿಗೆ 6 ಸಾವಿರಕ್ಕೆ ಬಾಡಿಗೆ ಮನೆ ಹಿಡಿದರು. ಎಳೆ ವಯಸ್ಸಿನ ಹಿರಿಯ ಮಗ  ಮನೆಯ ಜವಾಬ್ದಾರಿ ಹೊರಲು  S.S.L.C. ಯಲ್ಲಿ ಓದು ನಿಲ್ಲಿಸಿ, ಹೋಟೆಲ್ ನಲ್ಲಿ ವೇಟರ್ ಕೆಲಸಕ್ಕೆ ಸೇರಿಕೊಂಡು, ಇವನ ದುಡಿಮೆಯಲ್ಲಿ ಹಾಗೋ, ಹೀಗೋ ಜೀವನ ನಡೆಯುತ್ತಿರುವಾಗ, ಮೊದಲೇ ಕಷ್ಟದ ಸರಮಾಲೆಯಿಂದ ಸೋತು, ಸುಣ್ಣವಾಗಿದ್ದ  ಇವರ  ಪಾಲಿಗೆ ಶನಿ ಕರೋನದ ರೂಪದಲ್ಲಿ ಬಂದು ಆಟವಾಡಿಸಿದೆ. ಲಾಕ್ ಡೌನ್ ನಿಂದ ಹೋಟೇಲ್ ಗಳೆಲ್ಲಾ ಬಂದ್ ಆಗಿ, ನಿತೇಶ್ ಕೆಲಸವಿಲ್ಲದೆ, ಆದಾಯವಿಲ್ಲದೆ ಮನೆಯಲ್ಲಿ ಊಟಕ್ಕೆ ಕೂಡ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಒಂದು ಕಡೆ ಉಮೇಶ್ ಅವರ ಚಿಕಿತ್ಸೆಗೆ 10 ಸಾವಿರಕ್ಕೂ ಅಧಿಕ ಖರ್ಚು ಬೇಕಾಗುತ್ತದೆ. ಮನೆಯ ಬಾಡಿಗೆ ಕೊಡಬೇಕು. ಮಗಳು ನಿರೀಕ್ಷಾ ಕಾಲೇಜು ವ್ಯಾಸಂಗ ಮಾಡುತಿದ್ದಾಳೆ, ಕಾಲೇಜು ಅವಳ ವಿದ್ಯಾಭ್ಯಾಸಕ್ಕೇನೋ ಸಹಾಯ ಮಾಡುತಿದೆ. ಆದರೂ ಇತರ ಖರ್ಚು ನೋಡಿಕೊಳ್ಳಬೇಕು.

ಪೊರ್ತು ಚಾರಿಟೇಬಲ್ ಟ್ರಸ್ಟ್ (ರಿ) ಉಮೇಶ್ ಶೆಟ್ಟಿ ಇವರ ಪರಿವಾರದ  ಅಸಹಾಯಕ ಪರಿಸ್ಥಿತಿಗೆ ಸ್ಪಂದಿಸಿ, ಜೀವನ ನಿರ್ವಹಣೆಗೆ ನೆರವಾಗಲು  ಕನಿಷ್ಟ ರೂ.  50 ಸಾವಿರದ ಧನಸಹಾಯದ ಗುರಿಯೊಂದಿಗೆ ಧನಸಂಗ್ರಹಕ್ಕಿಳಿದಿದೆ. ಸಹೃದಯಿ ದಾನಿಗಳ ಉದಾರತೆ, ಮತ್ತು ಮಾನವೀಯತೆ, ತುತ್ತು ಅನ್ನಕ್ಕೆ ಕೂಡ ಪರದಾಡುವ ಪರಿಸ್ಥಿತಿ ಇರುವ ಈ ಪರಿವಾರಕ್ಕೆ ಅಲ್ಪಮಟ್ಟಿನ ಸಹಾಯವಾಗಬಹುದು.
-ಆಡಳಿತ ಮಂಡಳಿ,ಪೊರ್ತು ಚಾರಿಟೇಬಲ್ ಟ್ರಸ್ಟ್ (ರಿ)

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget