ಮುಡಾರು:ಮಳೆಗಾಲಕ್ಕೆ ಹಳ್ಳಗಳಾಗಿ ಬದಲಾಗಿರುವ ಮುಡಾರಿನ ರಸ್ತೆಗಳು:ನಿತ್ಯವೂ ಪ್ರಯಾಣಿಕರ ಗೋಳು ತಪ್ಪಿದ್ದಲ್ಲ!-Times of karkala
ಕಾರ್ಕಳ:ಸ್ವರ್ಣ ಕಾರ್ಕಳ ಪರಿಕಲ್ಪನೆ ರಸ್ತೆಗೆ ಕೋಟಿ ಕೋಟಿ ಅನುದಾನವನ್ನು ಘೋಷಣೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿದೆ ಹೊರತು ಅದು ರಸ್ತೆಯ ಗುಣಮಟ್ಟಕ್ಕೆ ಸೀಮಿತವಲ್ಲವೇ? ಎಂಬ ಪ್ರಶ್ನೆ ಮುಡಾರು ಗ್ರಾಮಸ್ಥರನ್ನು ಕಾಡಿರಬಹುದು. ಅದಕ್ಕೆ ಉತ್ತಮ ಉದಾಹರಣೆ ಮುಡಾರಿನ ರಸ್ತೆಗಳು. ಹೌದು ಬಜಗೋಳಿಯಿಂದ ಮುಡಾರು ಮಾರ್ಗವಾಗಿ ಕೆರ್ವಾಶೆಯನ್ನು ಸಂಪರ್ಕಿಸುವ ಅಲ್ದಟ್ಟ ಸೇತುವೆಯ ಬಳಿಯ ರಸ್ತೆಯ ಕಥೆ ಇದು.
ಬಜಗೋಳಿಯಿಂದ ಮುಡಾರು ವರೆಗೆ ಬಹುತೇಕ ಕಾಮಗಾರಿ ಮುಗಿದಿದೆ. ಆದರೆ ಸೇತುವೆಯ ಬಳಿಯ ಕಾಮಗಾರಿಗಳು ಅರ್ಧಕ್ಕೆ ನಿಂತಿದೆ. ಅಲ್ಲದೆ ಬಜರ್ಕಳದಿಂದ ಡಿಡಿ೦ಬಿರಿ ಮಾರ್ಗವಾಗಿ ಬಜಗೋಳಿ ಕಂಬಳ ಕ್ರಾಸ್ ವರೆಗೆ ಕೂಡಾ ಕಾಮಗಾರಿಯನ್ನು ಅರ್ಧಕ್ಕೆ ಕೈ ಬಿಡಲಾಗಿದೆ.
ಬಜಗೋಳಿ ಸರಕಾರಿ ಕಾಲೇಜಿನ ಎದುರು ಕೂಡಾ ಸೂಕ್ತ ಒಳಚರಂಡಿ ವವಸ್ಥೆ ಇಲ್ಲದೆ ಮಳೆ ನೀರು ರಸ್ತೆಯ ಮೇಲೆಯೇ ಬಂದು ಇಡೀ ರಸ್ತೆ ಕೆರೆಯಾಗಿ ಪರಿವರ್ತನೆಯಾಗುತ್ತದೆ.
ಈ ರಸ್ತೆ ಕೇವಲ ಮುಡಾರು ಮಾತ್ರವಲ್ಲದೆ ಕೆರ್ವಾಶೆ ಅಂಡಾರು, ಶಿರ್ಲಾಲು, ಹೆಬ್ರಿ, ಭಾಗವನ್ನೂ ಸಂಪರ್ಕಿಸುವುದರಿಂದ ದಿನನಿತ್ಯ ಸಾವಿರಾರು ವಾಹನಗಳು, ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಇವರೆಲ್ಲ ಮಳೆ ಇಲ್ಲದ ಸಂಧರ್ಭದಲ್ಲಿ ಹೊಂಡಗುಂಡಿಗಳಿಂದ ಕೂಡಿದ ರಸ್ತೆಗಳು ಮಳೆಯಿರುವ ಸಂಧರ್ಭದಲ್ಲಿ ರಸ್ತೆಯ ತುಂಬೆಲ್ಲ ನೀರನ್ನು ನೋಡಿ ಬೇಸತ್ತ ಜನರು ಹಿಡಿಶಾಪ ಹಾಕುವಂತಾಗಿದೆ.
ಹಲವಾರು ವರ್ಷಗಳ ಹಳೆಯದಾದ ಅಲ್ದಟ್ಟ ಸೇತುವೆಯೂ ಕೂಡ ಕಿರಿದಾಗಿದ್ದು ರಸ್ತೆಯ ಅತಿಯಾದ ಮಳೆಗೆ ಇಕ್ಕೆಲದಲ್ಲಿರುವ ಗದ್ದೆ ಹಳ್ಳಗಳ ನೀರೂ ಕೂಡಾ ರಸ್ತೆಗೆ ಬಂದು ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುತ್ತದೆ.
ಜನಪ್ರತಿನಿಧಿಗಳು ಮನಸ್ಸು ಮಾಡಿದಲ್ಲಿ ಶೀಘ್ರದಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗಬಹುದು ಎನ್ನುತ್ತಾರೆ ಈ ಭಾಗದಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರು.ಅಲ್ಲದೆ ಮಳೆಗಾಲದಲ್ಲಿ ಹಳ್ಳಗಳಾಗಿ ಬದಲಾಗುವ ಮುಡಾರಿನ ರಸ್ತೆಗಳಿಗೆ ಶಾಶ್ವತ ಪರಿಹಾರ ಸಿಗಲಿ ಎಂಬುದು ಈ ಭಾಗದ ಜನರ ಬೇಡಿಕೆಯಾಗಿದೆ.
ಜಾಹೀರಾತು

Post a comment