ಬೆಕ್ಕಿನ ಮರಿಯೆಂದು ಜಾಗ್ವಾರುಂಡಿ ಕಾಡು ಬೆಕ್ಕನ್ನು ಸಾಕಿದ್ದ ಮಹಿಳೆ!
ಅರ್ಜೆಂಟಿನಾದಲ್ಲಿ ಫ್ಲೋರೆನ್ಸಿಯಾ ಲೋಬೊ ಎಂಬ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎರಡು ಪುಟ್ಟ ಪ್ರಾಣಿಗಳು ಮಲಗಿದ್ದನ್ನು ನೋಡಿದರು. ಅವು ತುಂಬ ದುರ್ಬಲವಾಗಿದ್ದವು. ಹತ್ತಿರ ಹೋಗಿ ನೋಡಿದ ಲೋಬೋ ಅವರಿಗೆ ಪುಟ್ಟಪುಟ್ಟ ಬೆಕ್ಕಿನಮರಿಗಳಂತೆ ಕಂಡುಬಂದವು.
ಲೋಬೊ ಅವರಿಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಪ್ರೀತಿ. ಅದೆರಡೂ ಮರಿಗಳನ್ನು ರಕ್ಷಿಸುವುದಕ್ಕೋಸ್ಕರ ಹಿಡಿದುಕೊಂಡು ಮನೆಗೆ ತಂದರು. ಅದರಲ್ಲಿ ಒಂದು ಮರಿ ಬದುಕುಳಿಯಲಿಲ್ಲ. ಮತ್ತೊಂದು ಮರಿ ಉಳಿಯಿತು. ಆ ಬದುಕುಳಿದ ಮರಿಯನ್ನು ತಾವೇ ದತ್ತು ತೆಗೆದುಕೊಂಡು ಆರೈಕೆ ಮಾಡಲು ಲೋಬೋ ನಿರ್ಧರಿಸಿದರು. ಅದಕ್ಕೆ ಟಿಟೋ ಎಂದು ಹೆಸರನ್ನೂ ಇಟ್ಟರು.
ಹೀಗೆ ಆ ಮರಿಕೂಡ ಚೆನ್ನಾಗಿಯೇ ಬೆಳೆಯುತ್ತಿತ್ತು. ಆದರೆ ಒಂದು ದಿನ ಅದನ್ನು ಪಶುವೈದ್ಯಕೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಯಿತು. ಆದರೆ ಅಲ್ಲಿ ಹೋದಬಳಿಕ, ಆ ಬೆಕ್ಕಿನ ಮರಿಯನ್ನು ಪರಿಶೀಲನೆ ನಡೆಸಿದ ವೈದ್ಯರು ಬೇರೆಯದೇ ಸತ್ಯ ಹೇಳಿದರು. ಅದನ್ನು ಕೇಳಿ ಲೋಬೋ ಅಕ್ಷರಶಃ ಹೌಹಾರಿದರು.
ಯಾವುದನ್ನು ಬೀದಿಬದಿಯ ಬೆಕ್ಕಿನಮರಿಯೆಂದು ಭಾವಿಸಿ ಮನೆಗೆ ತಂದಿದ್ದರೋ ಅದು ನಿಜಕ್ಕೂ ಸಾಕುಬೆಕ್ಕಿನ ತಳಿಯೇ ಆಗಿರಲಿಲ್ಲ. ಬದಲಿಗೆ ಪುಮಾ ಕುಲಕ್ಕೆ ಸೇರಿದ ಜಾಗ್ವಾರುಂಡಿ ಕಾಡು ಬೆಕ್ಕಾಗಿತ್ತು. ಜಾಗ್ವಾರುಂಡಿ ಬೆಕ್ಕುಗಳು ಕಾಡಿನಲ್ಲಿ ವಾಸಿಸುತ್ತವೆ. ಅವು ಸಾಕುಬೆಕ್ಕುಗಳಿಗಿಂತಲೂ ದೊಡ್ಡದಾಗಿ ಇರುತ್ತವೆ ಮತ್ತು ಚಿರತೆಗಳಿಗಿಂತ ಸ್ವಲ್ಪ ಚಿಕ್ಕದಾಗಿರುತ್ತವೆ. ಇವು ಪರಭಕ್ಷಕಗಳು. ಆದರೆ ನೋಡಲು ಸ್ವಲ್ಪಮಟ್ಟಿಗೆ ಸಾಮಾನ್ಯ ಬೆಕ್ಕುಗಳನ್ನು ಹೋಲುವುದರಿಂದ ಲೋಬೋ ಬೇಸ್ತುಬಿದ್ದಿದ್ದರು.
ಅಷ್ಟಕ್ಕೂ ಸಾಮಾನ್ಯವಾಗಿ ಸಾಕುವ ಬೆಕ್ಕಿನ ಮರಿಗಳಿಗಿಂತ ಈ ಮರಿ ಚುರುಕಾಗಿರುವುದನ್ನು ಲೋಬೋ ಗಮನಿಸಿದ್ದರು. ಹೀಗೆ ಟಿಟೋ ಒಮ್ಮೆ ಏನೋ ಮಾಡಲು ಕಾಲಿಗೆ ಪೆಟ್ಟು ಮಾಡಿಕೊಂಡಿತು. ಅದಕ್ಕೆ ಚಿಕಿತ್ಸೆ ಕೊಡಿಸಲೆಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ವೈದ್ಯರು ಈ ಬೆಕ್ಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೋಬೋ ಅವರಿಗೆ ನೀಡಿದರು.
ಇವು ಬೆಕ್ಕುಗಳ ಪ್ರಬೇಧಕ್ಕೆ ಸೇರಿದ್ದರೂ ಸಾಕುಬೆಕ್ಕುಗಳಷ್ಟು ಸೌಮ್ಯವಲ್ಲ. ಮಾರಕವಾಗಿ ದಾಳಿ ಮಾಡಬಲ್ಲವು. ಇವು ಹೆಚ್ಚಾಗಿ ಉತ್ತರ ಅಮೆರಿಕಾ ಹಾಗೂ ದಕ್ಷಿಣ ಅಮೆರಿಕಾ ಕಾಡುಗಳಲ್ಲಿ ಕಂಡುಬರುತ್ತವೆ ಎಂದು ಪ್ರಾಣಿತಜ್ಞರು ಹೇಳಿದರು.
ಇದನ್ನೆಲ್ಲ ಕೇಳಿ ಶಾಕ್ಗೊಳಗಾದ ಲೋಬೋ ಆ ಬೆಕ್ಕನ್ನು ಅರ್ಜೆಂಟಿನಾ ಪ್ರಾಣಿ ಸಂರಕ್ಷಣಾ ಸಂಸ್ಥೆಗೆ ಒಪ್ಪಿಸಿದ್ದಾರೆ. ಅವರು ಕೂಡ ಜಾಗ್ವಾರುಂಡಿ ಪುಮಾಕ್ಕೆ ಅಗತ್ಯ ಚಿಕಿತ್ಸೆ ಕೊಡಿಸಿ ಕಾಡಿಗೆ ಬಿಡಲು ನಿರ್ಧರಿಸಿದ್ದಾರೆ.
ಪ್ರಾಣಿ ರಕ್ಷಣಾ ಸಂಸ್ಥೆ ಕಾಡುಬೆಕ್ಕಿನ ಫೋಟೋಗಳನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿಕೊಂಡಿದೆ. ಇದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.


Post a comment