ಉಡುಪಿ: 'ವಿಶ್ವಕರ್ಮರಿಗೆ ರಾಜ್ಯ ಸರ್ಕಾರದಿಂದ ಅನ್ಯಾಯ'-Times Of Karkala

 

ಉಡುಪಿ: 'ವಿಶ್ವಕರ್ಮರಿಗೆ   ರಾಜ್ಯ ಸರ್ಕಾರದಿಂದ  ಅನ್ಯಾಯ'-Times Of Karkala

ಉಡುಪಿ, ಆ 24 : "ವಿಶ್ವಕರ್ಮ ಸಮುದಾಯದವರು  ದೇವಸ್ಥಾನವನ್ನು ಕಟ್ಟಿಕೊಡುತ್ತಾರೆ, ಆದರೆ ಸರಕಾರ ನೇಮಿಸುವ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳಲ್ಲಿ ಸಮುದಾಯದವರಿಗೆ  ಅವಕಾಶಗಳೇ ಇಲ್ಲ. ದೇಶದಾದ್ಯಾಂತ ಪುರಾತನ ದೇವಸ್ಥಾನಗಳ ಸಹಿತ ಸಾವಿರಾರು ದೇವಸ್ಥಾನಗಳನ್ನು ವಿಶ್ವಕರ್ಮರಾದ ನಾವು ನಿರ್ಮಾಣ ಮಾಡಿದ್ದೇವೆ. ರಾಜ್ಯದ ಮುಜರಾಯಿ ಇಲಾಖೆಗೆ ಸೇರುವ ಯಾವುದೇ ದೇವಸ್ಥಾನಗಳಲ್ಲಿ ನಮನ್ನು ಅವಕಾಶ ವಂಚಿತರಾಗಿ ಮಾಡಿ ದೂರ ಇಡುತ್ತಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಬ್ಬ ವಿಶ್ವಕರ್ಮರಿಗೆ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತನದ ಅವಕಾಶ ನೀಡಬೇಕು. ರಾಜ್ಯದ "ಎ" ತರಗತಿಯ ಎಲ್ಲಾ ದೇವಸ್ಥಾನಗಳಲ್ಲೂ ಅವಕಾಶ ನೀಡಬೇಕು" ಎಂದು ಉಡುಪಿ ಜಿಲ್ಲಾ ವಿಶ್ವಕರ್ಮ  ಮಹಾಸಭಾದ ಜಿಲ್ಲಾ ಮುಖಂಡರಾದ ನೇರಂಬಳ್ಳಿ ರಮೇಶ್ ಆಚಾರ್ಯ ಒತ್ತಾಯಿಸಿದ್ದಾರೆ.                                

 ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಎಷ್ಟು ಜನ ವಿಶ್ವಕರ್ಮರಿಗೆ ಅವಕಾಶ ನೀಡಿದ್ದಾರೆ ಎಂದು  ಪ್ರಶ್ನಿಸಿದ್ದಾರೆ. 

ಬಿಜೆಪಿ ಶಾಸಕರಾದ ಬೈಂದೂರಿನ ಬಿ.ಎಂ.ಸುಕುಮಾರ ಶೆಟ್ಟಿ ಅವರ ಗೆಲುವಿಗೆ ಬೈಂದೂರು ನಾರಾಯಣ ಆಚಾರ್ಯರ ನೇತ್ರತ್ವದಲ್ಲಿ ಸುಮಾರು 14 ಸಾವಿರ ವಿಶ್ವಕರ್ಮರು ಮತ ನೀಡಿ ಬೆಂಬಲಿಸಿ ಗೆಲ್ಲಿಸಿದ್ದಾರೆ. ಅವರು ನಮಗೆ ಎನು ಮಾಡಿದ್ದಾರೆ. ಕೊನೆಗೆ ನಮ್ಮ ಅಧ್ಯಕ್ಷರಾದ ಮಾನ್ಯ ಕೆ.ಪಿ.ನಂಜುಂಡಿ ಅವರು ಹೇಳಿದರೂ ಕೂಡ ಬೈಂದೂರು ನಾರಾಯಣ ಆಚಾರ್ಯರಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶವನ್ನೇ ನೀಡಿಲ್ಲ. ಇದು ಯಾವ, ಅವರಿಗೆ ಮತ ನೀಡಲು ನಾವು ಬೇಕು, ಜಯಗಳಿಸಿದ ಮೇಲೆ ವಿಶ್ವಕರ್ಮರಿಗೆ ಎಲ್ಲಾ ವಿಚಾರದಲ್ಲೂ ಅನ್ಯಾಯ, ಇದು ಯಾವ ನ್ಯಾಯ? ಹೀಗೆ ಪರಿಸ್ಥಿತಿ ಮುಂದುವರಿದರೆ ಇಂತಹ ನಾಯಕರನ್ನು ನಾವು ದೂರ ಇಡುತ್ತೇವೆ. ಅವರಿಗೆ ತಕ್ಕ ಪಾಠ ಕಲಿಸಲು ನಾವು ಸದೃಡವಾಗಿದ್ದೇವೆ ಎಂದು ಬ್ಯೆಂದೂರು  ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ನಾರಾಯಣ ಆಚಾರ್ಯ ಬ್ಯೆಂದೂರು ಹೇಳಿದರು.

ಯುವ ಸಮುದಾಯದವರಿಗೆ ಉದ್ಯೋಗ ನೀಡಿ ಅವರ ಬದುಕು ಗಟ್ಟಿಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಅವರಲ್ಲಿ ಕೌಶಲ್ಯವಿದೆ, ವಿಶೇಷ ಪ್ರಾವೀಣ್ಯತೆ ಇದೆ. ನಮ್ಮ ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮೂಲಕ ವಿಶೇಷ ಹೊಸ ಯೋಜನೆ ರೂಪಿಸಿ ಅತೀ ಶೀಘ್ರವಾಗಿ ಉದ್ಯೋಗ ಕೊಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.  

'ಪಕ್ಷಕ್ಕಾಗಿ ದುಡಿದವರಿಗೆ ಅನ್ಯಾಯ ಮಾಡಬೇಡಿ'  

ರಾಜ್ಯಾದಾದ್ಯಂತ ಸಾವಿರಾರು ಮಂದಿ ವಿಶ್ವಕರ್ಮರು ಬಿಜೆಪಿ ಪಕ್ಷದ ಗೆಲುವಿಗಾಗಿ ನಿಸ್ವಾರ್ಥವಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ, ಅಂತವರಿಗೆ ಅನ್ಯಾಯ ಮಾಡಬೇಡಿ.  ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಗೀತಾ ಆಚಾರ್ಯ ಎಂಬವರು ಬಿಜೆಪಿ ಪಕ್ಷಕ್ಕಾಗಿ 15 ವರ್ಷಕ್ಕಿಂತಲೂ ಹೆಚ್ಚು ಕಾಲ ಪ್ರಾಮಾಣಿಕವಾಗಿ ದುಡಿದು ಪಕ್ಷದ ಸಂಘಟನೆ ಮತ್ತು ಮಹಿಳೆಯರನ್ನು ಪಕ್ಷದಲ್ಲಿ ಸಕ್ರೀಯರಾಗಿಸಲು ದುಡಿದಿದ್ದಾರೆ. ಕೊನೆಗೆ ಅವರಿಗೆ ನೀವು ಕೊಟ್ಟದ್ದು ಪಕ್ಷದಿಂದ ಉಚ್ಛಾಟನೆಯ ಶಿಕ್ಷೆ. ವಿಶ್ವಕರ್ಮ ಸಮುದಾಯದ ಯಾರೋಬ್ಬರಿಗೂ ಅನ್ಯಾಯವಾದರೇ ಸಹಿಸುವ ಪ್ರಶ್ನೆಯೇ ಇಲ್ಲ. ಅನ್ಯಾಯ ಆದವರಿಗೆ ನ್ಯಾಯ ಕೊಡುವ ಕೆಲಸ ಆಗಲೇಬೇಕು. ನಾವು ಸುಮ್ಮನಿರುವುದು ವಿಶ್ವಕರ್ಮರ ದೌರ್ಬಲ್ಯ ಎಂದು ಭಾವಿಸಬೇಡಿ, ನಮ್ಮಲ್ಲಿ ಬಲಿಷ್ಠ ಸಂಘಟನೆಯೂ ಇದೆ, ಶಕ್ತಿಯೂ ಇದೇ. 


'ಕೊರೊನಾ ಸಂಕಷ್ಟ : ಬಿಜೆಪಿ ಸರ್ಕಾರದಿಂದ ವಿಶ್ವಕರ್ಮರಿಗೆ ಅನ್ಯಾಯ '

ಪಂಚ ಕಸುಬು ಮಾಡುವ ವಿಶ್ವಕರ್ಮರ ಸಹಿತ ರಾಜ್ಯದಾದ್ಯಂತ ವಿಶ್ವಕರ್ಮ ಸಮುದಾಯವೇ ಕೊರೊನಾ ಮಹಾಮಾರಿಯ ಸಂಕಷ್ಟದಿಂದ ಕಂಗೆಟ್ಟು, ಬದುಕುವುದೇ ಕಷ್ಟವಾಗಿದೆ. ಕಳೆದ ಆರೇಳು ವರ್ಷಗಳಿಂದ ವಿಶ್ವಕರ್ಮರು ತೀವೃವಾದ ಸಮಸ್ಯೆಯಲ್ಲಿದ್ದಾರೆ. ಕಾರ್ಮಿಕರೇ ಹೆಚ್ಚಾಗಿರುವ ನಮ್ಮ ಸಮುದಾಯದಲ್ಲಿ ನಮ್ಮ ದುಡಿಯುವ ಕೈಗಳಿಗೆ ಉದ್ಯೋಗ ಇಲ್ಲ, ಮುಖ್ಯಮಂತ್ರಿಗಳು  ಕೊಟ್ಟಿದ್ದೇವೆ ಎಂದು  ತೋರಿಸಿಕೊಳ್ಳಲು ಒಂದೇರಡು ಜಾತಿಗೆ ಆರ್ಥಿಕ ಪ್ಯಾಕೇಜ್‌ ನೀಡಿ, ಅಗತ್ಯವಾಗಿ ಬಹುತೇಕ ಕಾರ್ಮಿಕರೇ ಇರುವ ನಮ್ಮ ವಿಶ್ವಕರ್ಮ ಸಮುದಾಯಕ್ಕೆ ಮುಖ್ಯಮಂತ್ರಿಗಳು ಅನ್ಯಾಯ ಮಾಡಿದ್ದಾರೆ. ನಾಡಿನ ಬಹುತೇಕ ವಿಶ್ವಕರ್ಮರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರಾದ ಮಾನ್ಯ ಕೆ.ಪಿ.ನಂಜುಂಡಿಯವರು ಕಾಂಗ್ರೆಸ್‌ ನಿಂದ ಬಿಜೆಪಿಗೆ ಬಂದ ಬಳಿಕ ಪರಿವರ್ತನಾ ಸಮಾವೇಶದ ಮೂಲಕ ಇಡೀ ರಾಜ್ಯ ಸಂಚಾರ ಮಾಡಿ ವಿಶ್ವಕರ್ಮರ ಮತಗಳನ್ನು ಬಿಜೆಪಿಗೆ ಹಾಕಿಸುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ. 

'ವಿಶ್ವಕರ್ಮ ಅಭಿವೃದ್ಧಿ ನಿಗಮದ ಸಾಲ ಮನ್ನಾ ಮಾಡಿ : ಕನಿಷ್ಠ 300 ಕೋಟಿ ರೂಪಾಯಿ ಪ್ಯಾಕೇಜ್‌ ನೀಡಿ '

 ಕೊರೊನಾ ಸಮಸ್ಯೆಯಿಂದಾಗಿ ಪರಿಸ್ಥಿತಿ ಕೈ ಮೀರಿದೆ. ಅತ್ಯಂತ ಸ್ವಾಭಿಮಾನಿಗಳಾದ ನಮ್ಮವರು ತಮ್ಮ ಸಮಸ್ಯೆಯನ್ನು ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ, ನಮ್ಮ ಸೌಮ್ಯತನವನ್ನು ನಮ್ಮ ದುರ್ಬಲತೆ ಎಂದು ಭಾವಿಸಬೇಡಿ, ಕಳೆದ ಆರೇಳು ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 18 ಸಾವಿರ ವಿಶ್ವಕರ್ಮರಿಗೆ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಮೂಲಕ 95 ಕೋಟಿ ರೂಪಾಯಿ ಸಾಲ ಸೌಲಭ್ಯ ನೀಡಲಾಗಿದೆ. ಅದರಲ್ಲಿ 7 ಲಕ್ಷ ರೂಪಾಯಿಯಷ್ಟು ಸಾಲವನ್ನು ಫಲಾನುಭವಿಗಳು ಮರುಪಾವತಿ ಮಾಡಿದ್ದಾರೆ. ಈಗ ಕೊರೊನಾ ಸಂಕಷ್ಟದಿಂದ ಯಾರೂ ಸಾಲ ಕಟ್ಟುವ ಸ್ಥಿತಿಯಲ್ಲೇ ಇಲ್ಲ.  ನೇಕಾರರು, ಮೀನುಗಾರರ ಸಾಲ ಮನ್ನಾ ಮಾಡಿದಂತೆ ಅತೀ ಶೀಘ್ರವಾಗಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ಸಾಲವನ್ನು ಮನ್ನಾ  ಮಾಡಬೇಕು, ಜೊತೆಗೆ ವಿಶ್ವಕರ್ಮ ಸಮುದಾಯವನ್ನು ಸಂಕಷ್ಟದಿಂದ ಮೇಲೆತ್ತಲು ತುರ್ತಾಗಿ 300 ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಬೇಕು. ಉಡುಪಿ,ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಬಹುತೇಕ ವಿಶ್ವಕರ್ಮರು ಬಿಜೆಪಿಯನ್ನು ಬೆಂಬಲಿಸಿ ಮತ ನೀಡಿ ಶಾಸಕರಾಗಿ ಆಯ್ಕೆಗೊಳ್ಳುವಲ್ಲಿ ಸಹಕರಿಸಿದ್ದಾರೆ. 3 ಜಿಲ್ಲೆಗಳ ಶಾಸಕರು ಮುಖ್ಯಮಂತ್ರಿಯವರನ್ನು ಬೇಟಿ ಮಾಡಿ ಮನವರಿಕೆ ಮಾಡಿ ನಿಗಮದ ಸಾಲ ಮನ್ನಾ ಮತ್ತು 300 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌ ಘೋಷಣೆಗೆ ಒತ್ತಾಯಿಸಬೇಕು. ಇಲ್ಲವಾದರೇ ಎಲ್ಲಾ ವಿಶ್ವಕರ್ಮರಿಗೆ ರಾಜಕೀಯ ಪ್ರಜ್ಞೆ ಮೂಡಿಸಿ ನಿಜಾಂಶ ಅರ್ಥವಾಗುವಂತೆ ಹೇಳಿ ಬೇರೆ ದಿಕ್ಕಿನತ್ತ ಯೋಚನೆ ಮಾಡುವ ಅನಿವಾರ್ಯತೆ ಇದೆ.

'ನಮಗೆ ಗೌರವ ಸ್ಥಾನಮಾನ ಅಲ್ಲ : ಅಧಿಕಾರದ ಶಕ್ತಿ ನೀಡಿ ' 

ರಾಜ್ಯದ 45 ಲಕ್ಷ ಮಂದಿ ವಿಶ್ವಕರ್ಮರು ಬಿಜೆಪಿಯನ್ನು ಬೆಂಬಲಿಸಿ ಪಕ್ಷಕ್ಕೆ ಅಧಿಕಾರ ದೊರೆಯಲು ಸಹಕರಿಸಿದ್ದಾರೆ. ನೀವು ನಮಗೆ ಗೌರವ ಸ್ಥಾನಮಾನ ನೀಡಿದರೇ ಸಾಕಾಗಲ್ಲ. ಅಧಿಕಾರದ ಶಕ್ತಿ ನೀಡಬೇಕು. ನಮ್ಮ ಅಧ್ಯಕ್ಷರು ಇಡೀ ರಾಜ್ಯವನ್ನು ಎರಡು ಸಲ ಸುತ್ತಿ, ವಿಶ್ವಕರ್ಮ ಸಮುದಾಯವೇ ಯಡಿಯೂರಪ್ಪನವರು ಮತ್ತು ಬಿಜೆಪಿಯನ್ನು ಬೆಂಬಲಿಸುವಂತೆ ಮಾಡಿದ್ದಾರೆ. ಉಡುಪಿ ದಕ್ಷಿಣ ಕನ್ನಡ ಸಹಿತ ಕರಾವಳಿ ಜಿಲ್ಲೆ ಅಂದಾಕ್ಷಣ ವಿಶ್ವಕರ್ಮರು ಬಿಜೆಪಿಯನ್ನೇ ಬೆಂಬಲಿಸುತ್ತಾರೆ ಎಂದು ಎಲ್ಲರೂ ನಂಬಿದ್ದಾರೆ. ಅದು ಸತ್ಯ ಕೂಡ. ಈಗ ಬಿಜೆಪಿ ಬೆಂಬಲಿಸಿದ ವಿಶ್ವಕರ್ಮರ ನಂಬಿಕೆಗೆ ದ್ರೋಹವಾಗಿದೆ. ನಂಬಿಕೆ ವಿಶ್ವಾಸಕ್ಕೆ ಬೆಲೆ ಇಲ್ಲ, ವಿಶ್ವಾಸ ದ್ರೋಹ ಮಾಡಿದರೇ ಇನ್ನೂ ಸುಮ್ಮನಿರಲು ಸಾಧ್ಯವಿಲ್ಲ. ಎಲ್ಲಡೆಯು ಯುವಕರ ಸಂಘಟನೆಯನ್ನು ಗ್ರಾಮಗ್ರಾಮಗಳಲ್ಲಿ ಮಾಡಿ ತಕ್ಕ ಪಾಠವನ್ನು ಕಲಿಸುತ್ತೇವೆ. ರಾಜ್ಯದಾದ್ಯಂತ ನಾವೆಲ್ಲ ಒಂದೇ ವೇದಿಕೆಯಡಿ ಸಂಘಟಿತರಾಗುತ್ತಿದ್ದೇವೆ. ನಮ್ಮ ಅಧ್ಯಕ್ಷರನ್ನು ನೀವು ಎಂಎಲ್‌ಸಿ ಮಾಡಿದ್ದೀರಿ ಎಂದು ನೀವು ಹೇಳಿಕೊಳ್ಳಬಹುದು. ನಮಗೆ ಎಂಎಲ್‌ಸಿ ಗೌರವದ ಸ್ಥಾನ ಮುಖ್ಯ ಅಲ್ಲ. ಹೆಸರಿಗೊಂದು ಎಂಎಲ್‌ಸಿ ಅಂತ ಹೆಸರು ಬೇಡ ನಮಗೆ, ಅವರಿಗೆ ಅಧಿಕಾರದ ಶಕ್ತಿ, ಆ ಮೂಲಕ ಅವರ ನಮ್ಮ ಸಮಾಜದ ಅಭ್ಯುದಯಕ್ಕೆ ಶ್ರಮಿಸಬೇಕಿದೆ, ಅವರ ಕೈಗೆ ಶಕ್ತಿ ಕೊಡಿ. ಅವರನ್ನು ಹಿಂದುಳಿದ ವರ್ಗಗಳ ನಾಯಕರಾಗಿ ಬೆಳೆಸುತ್ತೇವೆ ಎಂದು ನೀವೆಲ್ಲ ಮಾತು ಕೊಟ್ಟಿದ್ದೀರಿ. ಈಗ ಕೇವಲ ಒಂದು ಜಾತಿಗೆ ಸಿಮೀತಗೊಳಿಸಿದ್ದೀರಿ. ನಮ್ಮ ವಿಶ್ವಕರ್ಮ ಸಮಾಜದ ಏಳಿಗೆಗೋಸ್ಕರ ಮುಖ್ಯಮಂತ್ರಿಗಳು ನಮ್ಮ ಅಧ್ಯಕ್ಷರಿಗೆ ಶಕ್ತಿ ನೀಡಲೇಬೇಕು. ಅಧ್ಯಕ್ಷರ ಮೂಲಕ ನಾವೆಲ್ಲ ಪಕ್ಷವನ್ನು ಬೆಂಬಲಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯೇ ಮಾಡಿದ್ದೇವೆ. 

'ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವಕರ್ಮರಿಗೆ ಪ್ರಾತಿನಿಧ್ಯ ನೀಡಿ' 

ರಾಜ್ಯದ ಪ್ರತಿ ಜಿಲ್ಲೆಯಲ್ಲೂ 2 ಜನ ವಿಶ್ವಕರ್ಮರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಬೇಕು. ರಾಜ್ಯ 224 ವಿಧಾನಸಭಾ ಕ್ಷೇತ್ರದಲ್ಲೂ ನಿಗಮ ಮಂಡಳಿ, ಕಾರ್ಪೋರೇಶನ್‌ಗಳಲ್ಲಿ ಕನಿಷ್ಠ 4 ಮಂದಿ ವಿಶ್ವಕರ್ಮರಿಗೆ ರಾಜಕೀಯವಾಗಿ ಪ್ರಾತಿನಿಧ್ಯದ ಅವಕಾಶ ನೀಡಬೇಕು. ಇದನ್ನು ಎಲ್ಲಾ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡಲೇಬೇಕು. ವಿಶ್ವಕರ್ಮರಿಗೆ ವಿಶೇಷ ಬೆಂಬಲ ನೀಡಲೇ ಬೇಕು ಎಂದು ರಮೇಶ್ ಆಚಾರ್ಯ ಒತ್ತಾಯಿಸಿದರು. 

ಸುದ್ದಿಗೋಷ್ಠಿಯಲ್ಲಿ ಬ್ಯೆಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ  ನಾರಾಯಣ ಆಚಾರ್ಯ ಬೈಂದೂರು, ಉಡುಪಿ ಜಿಲ್ಲಾ ವಿಶ್ವಕರ್ಮ ಮಹಾಸಭಾದ ಮುಖಂಡರಾದ   ಎಚ್. ರಮೇಶ್‌ ಆಚಾರ್ಯ ಹೆಬ್ರಿ,ಬ್ಯೆಂದೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ಕೋಶಾಧಿಕಾರಿ ರಾಜೇಶ್‌ ಆಚಾರ್ಯ ಬೈಂದೂರು, ವಿಶ್ವಕರ್ಮ ಸಮಾಜದ ಹಿರಿಯರಾದ ಬಾರ್ಕೂರು ಗಂಗಾಧರ ಆಚಾರ್ಯ ಉಪಸ್ಥಿತರಿದ್ದರು.


 

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget