ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬವನ್ನು ನೀಲಾವರ ಗೋಶಾಲೆಯ 25 ಗೋವುಗಳನ್ನು ತನ್ನ ವೈಯಕ್ತಿಕ ನೆಲೆಯಲ್ಲಿ ದತ್ತು ಸ್ವೀಕರಿಸುವ ಮೂಲಕ ವಿಶಿಷ್ಟವಾಗಿ ಆಚರಿಸುವುದಾಗಿ ಯಶ್ ಪಾಲ್ ಎ ಸುವರ್ಣ ತಿಳಿಸಿದ್ದಾರೆ. ಗೋಸಂರಕ್ಷಣೆಗೆ ವಿಶೇಷ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಗೋ ಸಂರಕ್ಷಣೆ ಹಾಗು ಹೈನುಗಾರಿಕಾ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದೇ ಪೇಜಾವರ ಮಠದ ವಿಶ್ವಪ್ರಸನ್ನ ರ ಅನುಗ್ರಹದೊಂದಿಗೆ 25 ಗೋವುಗಳನ್ನು ದತ್ತು ಸ್ವೀಕರಿಸುವುದಾಗಿ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಗೋವುಗಳ ದತ್ತು ಸ್ವೀಕಾರಕ್ಕೆ ಸಾರ್ವಜನಿಕರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀವಿಶ್ವೇಶತೀರ್ಥ ಗೋರಕ್ಷಕ ಬಳಗ ಸಂಸ್ಥೆಯ ಮೂಲಕ ನರೇಂದ್ರ ಮೋದಿ ಗೋವು ದತ್ತು ಪಡೆಯುವ ಅಭಿಯಾನ ನಡೆಸುವ ವಿಶೇಷ ಯೋಜನೆ ರೂಪಿಸಲಾಗಿದೆ.
ತೀರಾ ವೆಚ್ಚದಾಯಕವಾಗಿರುವ ಗೋಶಾಲೆಗಳನ್ನು ನಡೆಸುತ್ತಿರುವ ಸಂಸ್ಥೆಗಳು ಕೋರೋಣ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಹಿನ್ನೆಲೆಯಲ್ಲಿ ಈ ಅಭಿಯಾನದ ಮೂಲಕ ಆರ್ಥಿಕ ನೆರವು ಒದಗಿಸುವುದರ ಜತೆಗೆ, ದೇಶದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪೂಜನೀಯ ಗೋಮಾತೆಯ ಸಂರಕ್ಷಣೆಯತ್ತ ಅಳಿಲು ಸೇವೆ ಮಾಡುವ ಉದ್ದೇಶದಿಂದ ಈ ಅಭಿಯಾನದಲ್ಲಿ ನರೇಂದ್ರ ಮೋದಿ ಅಭಿಮಾನಿಗಳು, ಸಾರ್ವಜನಿಕರು ಕೈಜೋಡಿಸುವಂತೆ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.


Post a comment