ಬಿಹಾರ,ಸೆ,13 : ಹತ್ತಿರದ ಬೆಟ್ಟದಿಂದ ಬರುವ ಮಳೆನೀರನ್ನು ಬಿಹಾರದ ಗಯಾದ ಲಹ್ತುವಾ ಪ್ರದೇಶದ ಕೋತಿಲವಾ ಎಂಬ ತನ್ನ ಹಳ್ಳಿಯ ಹೊಲಗಳಿಗೆ ಕೊಂಡೊಯ್ಯಲು ವ್ಯಕ್ತಿಯೊಬ್ಬರು ಮೂರು ಕಿಲೋಮೀಟರ್ ಉದ್ದದ ಕಾಲುವೆಯನ್ನು ಅಗೆದು ಸುದ್ದಿಯಾಗಿದ್ದಾರೆ.
ಈ ಕಾಲುವೆಯನ್ನು ಅಗೆಯಲು ನನಗೆ 30 ವರ್ಷಗಳು ಬೇಕಾಯಿತು. ಕೊಳವೆ ಮೂಲಕ ಬೆಟ್ಟದ ನೀರನ್ನು ಹಳ್ಳಿಯ ಕೊಳಕ್ಕೆ ಕೊಂಡೊಯ್ಯುಲಾಗಿದೆ ಎಂದು ಗಯಾದಲ್ಲಿ ಕಾಲುವೆಯನ್ನು ಒಂಟಿಯಾಗಿ ಅಗೆದ ಲಾಂಗಿ ಭುಯಾನ್ ಹೇಳಿದ್ದಾರೆ.
ಕಳೆದ 30 ವರ್ಷಗಳಿಂದ, ನಾನು ನನ್ನ ಜಾನುವಾರುಗಳನ್ನು ಸಾಕಲು ಮತ್ತು ಕಾಲುವೆಯನ್ನು ಅಗೆಯಲು ಹತ್ತಿರದ ಕಾಡಿಗೆ ಹೋಗುತ್ತಿದ್ದೆ. ಈ ಪ್ರಯತ್ನದಲ್ಲಿ ಯಾರೂ ನನ್ನೊಂದಿಗೆ ಸೇರಿಕೊಳ್ಳಲಿಲ್ಲ. ಗ್ರಾಮಸ್ಥರು ಜೀವನೋಪಾಯಕ್ಕಾಗಿ ನಗರಗಳಿಗೆ ಹೋಗುತ್ತಿದ್ದಾರೆ ಆದರೆ ನಾನು ಇದೇ ಕೆಲಸವನ್ನು ಮಾಡುತ್ತಿದ್ದೆ ಎಂದು ಭುಯಾನ್ ಹೇಳಿದ್ದಾರೆ.
ಕೋತಿಲ್ವಾ ಗ್ರಾಮವು ಗಯಾ ಜಿಲ್ಲಾ ಕೇಂದ್ರದಿಂದ 80 ಕಿ.ಮೀ ದೂರದಲ್ಲಿರುವ ದಟ್ಟವಾದ ಕಾಡು ಮತ್ತು ಪರ್ವತಗಳಿಂದ ಆವೃತವಾಗಿದೆ. ಈ ಗ್ರಾಮವನ್ನು ಮಾವೋವಾದಿಗಳಿಗೆ ಆಶ್ರಯವೆಂದು ಗುರುತಿಸಲಾಗಿದೆ.
ಇಲ್ಲಿನ ಜನರಿಗೆ ಜೀವನೋಪಾಯದ ಮುಖ್ಯ ಮಾರ್ಗವೆಂದರೆ ಕೃಷಿ ಮತ್ತು ಪಶುಸಂಗೋಪನೆ. ಮಳೆಗಾಲದಲ್ಲಿ, ಪರ್ವತಗಳಿಂದ ಬೀಳುವ ನೀರು ನದಿಗೆ ಹರಿಯುತ್ತಿತ್ತು, ಅದು ಭೂಯಾನ್ ಅವರನ್ನು ಕಾಡುತ್ತಿತ್ತು, ನಂತರ ಅವರು ಕಾಲುವೆಯನ್ನು ಕೊರೆಯಲು ಮುಂದಾಗಿದ್ದಾರೆ.
Post a comment