ಕಾರ್ಕಳ: ಒಳಚರಂಡಿ ಮಂಡಳಿ ಮತ್ತು ಗುತ್ತಿಗೆದಾರರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲು-Times Of Karkala
ಕಾರ್ಕಳ,ಸೆ.1: ಮೂರು ಮಾರ್ಗದಿಂದ ವೆಂಕಟರಮಣ ದೇವಸ್ಥಾನದ ಬಳಿ ಇರುವ ಸ್ಟೇಟ್ಬ್ಯಾಂಕ್ ವರೆಗಿನ ಒಳಚರಂಡಿ ಕಾಮಗಾರಿಯ ಸಂದರ್ಭ ಆಮಾನವೀಯ, ಕಾನೂನುಬಾಹಿರ ಮತ್ತು ಬೇಜವಾಬ್ದಾರಿ ಕೃತ್ಯ ಎಸಗಿರುವ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡುವಂತೆ ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತೀಚಿಗೆ ನಡೆದ ಒಳಚರಂಡಿ ಯೋಜನೆಯ ಕಾಮಗಾರಿಯಲ್ಲಿ ಒಳಚರಂಡಿಯಲ್ಲಿ ಹರಿದು ಹೋಗಬೇಕಾಗಿದ್ದ ತ್ಯಾಜ್ಯ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಬಿಟ್ಟು ಬೇಜವಾಬ್ದಾರಿ ವರ್ತನೆ ತೋರಿರುತ್ತಾರೆ. ಅಧಿಕಾರಿಗಳು, ಗುತ್ತಿಗೆದಾರರ ಕಳಪೆ ಮಟ್ಟದ ಪರಿಶೀಲನೆ ಮತ್ತು ನಿರ್ವಹಣೆಯಿಂದ ಈ ಕಾನೂನು ಬಾಹಿರ ಕೃತ್ಯ ನಡೆದಿದ್ದು ರಸ್ತೆಯಲ್ಲಿ ಓಡಾಡುವ ಅನೇಕ ಜನರಿಗೆ, ವಾಸ್ತವ್ಯವಿರುವ ನಾಗರಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಅಪಾರ ರೀತಿಯ ಹಾನಿ ಹಾಗೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುತ್ತದೆ. ಇದಲ್ಲದೇ ಈ ಪ್ರದೇಶದಲ್ಲಿ ವಿವಿಧ ಧಾರ್ಮಿಕ ಕೇಂದ್ರಗಳು, ಹೋಟೆಲ್, ಆಸ್ಪತ್ರೆ ಮತ್ತು ವಾಣಿಜ್ಯ ಸಂಕೀರ್ಣಗಳು ಉಪಯೋಗಿಸುವ ನೀರಿನ ವ್ಯವಸ್ಥೆ ಇದ್ದು ಇವರ ಈ ಕೃತ್ಯದಿಂದ ಈ ನೈಸರ್ಗಿಕ ಸಂಪನ್ಮೂಲಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು ಮುಂದಿನ ದಿನಗಳಲ್ಲಿ ರೋಗರುಜಿನಗಳು ಹರಡುವ ಭೀತಿ ಸಾರ್ವಜನಿಕರಿಗೆ ಉಂಟಾಗಿದೆ. ಈ ಕೃತ್ಯದಿಂದಾಗಿ ರಸ್ತೆ ಮತ್ತು ಆಸುಪಾಸಿನ ಪ್ರದೇಶದಲ್ಲಿ ಪರಿಸರ ಮಾಲಿನ್ಯವು ಸಂಭವಿಸಿದ್ದು, ಸಾರ್ವಜನಿಕರಲ್ಲಿ ಭಯ ಉಂಟಾಗಿ ಮಾನಸಿಕವಾಗಿ ನೊಂದಿರುತ್ತಾರೆ. ಆದ್ದರಿಂದ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಈ ಕೃತ್ಯವು ಭಾರತೀಯ ದಂಡ ಸಂಹಿತೆ ಕಲಂ 268, 269, 270 ರ ಪ್ರಕಾರ ಅಪರಾಧವಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ಶುಭದ ರಾವ್ ದೂರಿನಲ್ಲಿ ಮನವಿ ಮಾಡಿದ್ದಾರೆ .
Post a comment