ಹೆಬ್ರಿ,ಸೆ,15: ಹೆಬ್ರಿ ತಾಲ್ಲೂಕು ಮುದ್ರಾಡಿ ಅಜೆಕಾರು ವಲಯ ಶೆಟ್ಟಿಗಾರ್ ಸಮಾಜ ಸೇವಾ ಸಂಘ, ಮಹಿಳಾ ಮತ್ತು ಯುವ ವೇದಿಕೆಯ ವತಿಯಿಂದ ಮಂಗಳವಾರ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2019ನೆಯ ಸಾಲಿನ ಪ್ರತಿಷ್ಠಿತ “ಪಾರ್ತಿಸುಬ್ಬ” ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅವರನ್ನು ಸ್ವಗ್ರಹ ಅಕ್ಷರದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಮಾತನಾಡಿದ ಅಂಬಾತನಯ ಮುದ್ರಾಡಿ, ನೀವೆಲ್ಲ ನನ್ನ ಬಂಧುಗಳು, ಅಭಿಮಾನಿಗಳು. ಪಾರ್ತಿಸುಬ್ಬ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ಅಂಬಿನಂದಿಸಿದ್ದೀರಿ, ನಾವು ಯಾರಿಗೆ ಏನನ್ನು ಕೊಟ್ಟು ಸಂತೃಪ್ತಿಪಡಿಸಬಲ್ಲೆವು. ಮನುಷ್ಯ ಮನುಷ್ಯನಿಗೆ ಪ್ರೀತಿ ಮಾತ್ರ ಕೊಡಬಲ್ಲರು ಎಂದು ಹೇಳಿದರು.
ನಾನು ನಂಬಿ ಬಂದದ್ದು, ನಂಬಿ ನಡೆಯುತ್ತಿರುವುದು ಮುದ್ರಾಡಿ ಭಕ್ರೆ ಮಠದ ದೇವಿ ಭದ್ರಕಾಳಿಯನ್ನು. ನಾನು ಅಂಬಾತನಯ ಎಂದು ಕಾವ್ಯನಾಮ ಇಟ್ಟುಕೊಂಡಿರುವುದು ಕೂಡ ಅವಳ ರಕ್ಷಣೆಯ ಕೃಪೆಯಿಂದ, ನನ್ನ ತಂದೆಯವರು ಸುಮಾರು ೨೫ ವರ್ಷಗಳಿಂದ ಭಕ್ರೆಮಠದಲ್ಲಿ ಮಾಡುತ್ತಿದ್ದ ಭಜನೆಯನ್ನು ನಾನು ಮುಂದುವರಿಸಿಕೊಂಡು ಬಂದಿರುತ್ತೇನೆ. ಭಜನೆ ಪ್ರಾರಂಭ ಮಾಡುವುದು ನಾನೇ ಮುಕ್ತಾಯಗೊಳಿಸುವುದು ನಾನೇ. ದೇವಿಯ ಮುಡಿಯಿಂದ ಹೂ ಕೆಳಗೆ ಬೀಳದೆ ನಾನು ಅಲ್ಲಿಂದ ಕದಲುತ್ತಿರಲಿಲ್ಲ. ನನ್ನ ಬೆನ್ನ ಹಿಂದೆ ನಾನು ನಂಬಿದ ತಾಯಿ ನನಗೆ ಶ್ರೀರಕ್ಷೆಯಾಗಿದ್ದಾಳೆ ಎಂದು ಸಾಹಿತಿ ಅಂಬಾತನಯ ಮುದ್ರಾಡಿ ಬಾವುಕರಾದರು.
ಪ್ರೀತಿಗಾಗಿ ಎಲ್ಲರೂ ನನ್ನನ್ನು ನಮ್ಮ ಮನೆಯಲ್ಲೇ ಗೌರವಿಸಿದ್ದೀರಿ. ನಾನು ನಿಮ್ಮ ಪ್ರೀತಿಗೆ, ನನ್ನ ಸಮಾಜಕ್ಕೆ ಏನನ್ನು ಕೊಡಬಲ್ಲೆ, ಏನನ್ನೂ ಕೊಟ್ಟಿಲ್ಲ. ನನ್ನನ್ನೆ ನನ್ನ ಸಮಾಜಕ್ಕೆ ಕೊಟ್ಟಿದ್ದೇನೆ. ನಿಮ್ಮ ವಿಶ್ವಾಸ ಇರುವಲ್ಲಿಯವರೆಗೆ ನನ್ನ ಶ್ವಾಸವಿರುತ್ತದೆ. ನನ್ನ ಮೇಲಿನ ಅಕ್ಕರೆಯ ಪ್ರೀತಿ, ಅಭಿಮಾನದಿಂದ, ನನ್ನ ಮನೆಗೆ ಬಂದು ಅಭಿನಂದಿಸಿದ ನಿಮಗೆ ಚಿರಋಣಿಯಾಗಿರುತ್ತೇನೆ ಎಂದು ಕೃತಜ್ಞತೆ ಸಲ್ಲಿಸಿದರು.
ಸಂಘದ ಅಧ್ಯಕ್ಷ ಎಸ್. ಟಿ. ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಯುವವೇದಿಕೆಯ ಅಧ್ಯಕ್ಷ ಲೋಕೇಶ್ ಕನ್ಯಾನ, ಸಂಘದ ಗೌರವ ಸಲಹೆಗಾರ ಮುದ್ರಾಡಿ ವಿಜಯಕುಮಾರ್ ಉಡುಪಿ, ಕಬ್ಬಿನಾಲೆ ಗೋವಿಂದ ಶೆಟ್ಟಿಗಾರ್, ಮುನಿಯಾಲು ಮಾತಿಬೆಟ್ಟು ಕೃಷ್ಣ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿ ಸುಮಲತಾ ಸಂತೋಷ್, ಕೋಶಾಧ್ಯಕ್ಷ ಸದಾಶಿವ ಶೆಟ್ಟಿಗಾರ್ ಕನ್ಯಾನ ಉಪಸ್ಥಿತರಿದ್ದರು.
Post a comment