ಮಂಗಳೂರು ಗಲಭೆ: 21 ಆರೋಪಿಗಳಿಗೆ ಸುಪ್ರೀಂ ಜಾಮೀನು-Times Of Karkala

ಮಂಗಳೂರು,ಸೆ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆ, ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿ 21 ಮಂದಿ ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ, ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮತ್ತು ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಕರ್ನಾಟಕ ಹೈಕೋರ್ಟ್‌ ಆರೋಪಿಗಳಿಗೆ ಜಾಮೀನು ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ಸಾಂದರ್ಭಿಕ  ಚಿತ್ರ    
ಕಳೆದ ವರ್ಷ ಡಿಸೆಂಬರ್ 19 ರಂದು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದು ಪೊಲೀಸರು ಪ್ರತಿಭಟನಾಕಾರರ ಮೇಲೆ ಗೋಲಿಬಾರ್‌ ನಡೆಸಿದ್ದರು. ಗುಂಡಿನ ದಾಳಿಯಿಂದಾಗಿ ಇಬ್ಬರು ಪ್ರತಿಭಟನಾಕಾರರಾದ ನೌಶೀನ್‌ ಹಾಗೂ ಜಲೀಲ್‌ ಕುದ್ರೋಳಿ ಮೃತಪಟ್ಟಿದ್ದರು. ಬಳಿಕ ಸರ್ಕಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ನೇತೃತ್ವದಲ್ಲಿ ಮ್ಯಾಜಿಸ್ಟ್ರೀಯಲ್ ತನಿಖೆಗೆ ಆದೇಶಿಸಿತ್ತು.
ಮ್ಯಾಜಿಸ್ಟ್ರೀಯಲ್ ತನಿಖಾಧಿಕಾರಿಯಾದ ಜಿ ಜಗದೀಶ್‌ ಅವರು ಈ ಪ್ರಕರಣದ ಮ್ಯಾಜಿಸ್ಟ್ರೀಯಲ್ ತನಿಖೆ ವಿಚಾರಣೆಯನ್ನು ಸೆಪ್ಟೆಂಬರ್‌ 1 ರಂದು ಅಂತ್ಯಗೊಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 416 ಮಂದಿಯ ವಿಚಾರಣೆ ನಡೆಸಲಾಗಿದ್ದು ಸೆಪ್ಟೆಂಬರ್‌ 20 ರ ಒಳಗಾಗಿ ಸರ್ಕಾರಕ್ಕೆ ತನಿಖಾಧಿಕಾರಿ ಜಗದೀಶ್‌ ಅವರು ತನಿಖಾ ವರದಿ ಸಲ್ಲಿಸಲ್ಲಿದ್ದಾರೆ.
ಇನ್ನು ಈ ಎಲ್ಲಾ ಆರೋಪಿಗಳಿಗೂ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ರಾಜ್ಯ ಸರ್ಕಾರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪ್ರತಿಯೊಬ್ಬ ಆರೋಪಿಗೆ 25 ಸಾವಿರ ರೂ.ಗಳ ಜಾಮೀನು ನೀಡುವಂತೆ ಸೂಚಿಸಿದ್ದು ಪ್ರತಿ ಪರ್ಯಾಯ ಸೋಮವಾರ ಹತ್ತಿರದ ಪೊಲೀಸ್ ಠಾಣೆಗೆ ವರದಿ ಸಲ್ಲಿಸಬೇಕು ಮತ್ತು ಯಾವುದೇ ಹಿಂಸಾತ್ಮಕ ಚಟುವಟಿಕೆಗಳಲ್ಲಿ / ಸಭೆಗಳಲ್ಲಿ ಭಾಗವಹಿಸಬಾರದು ಎಂದು ಎಚ್ಚರಿಕೆ ನೀಡಿದೆ.

 

ಜಾಹೀರಾತು

Post a comment

MKRdezign

Contact form

Name

Email *

Message *

Powered by Blogger.
Javascript DisablePlease Enable Javascript To See All Widget