ಕಾರ್ಕಳ:ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟ ಸತೀಶ್ ರಾವ್ ಕರ್ವಾಲುರವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ-ಟೈಮ್ಸ್ ಆಫ್ ಕಾರ್ಕಳ ವಿಶೇಷ ವರದಿ

ಕಾರ್ಕಳ:ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟ ಸತೀಶ್ ರಾವ್ ಕರ್ವಾಲುರವರಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ-ಟೈಮ್ಸ್ ಆಫ್ ಕಾರ್ಕಳ ವಿಶೇಷ ವರದಿ 

ಕಾರ್ಕಳ,ಸೆ.04:ಸತೀಶ್ ರಾವ್ ಕರ್ವಾಲು,ಮುಖ್ಯ ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಲಿಯಾಳ. 2020ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಅಪರೂಪದ ಶಿಕ್ಷಕ. 25 ವರ್ಷಗಳ ಸಾರ್ಥಕ್ಯ ಸೇವೆ. ಶಿಕ್ಷಕ ಹೇಗಿರಬೇಕು ಎನ್ನುವುದಕ್ಕೆ ಅನ್ವರ್ಥ ವ್ಯಕ್ತಿತ್ವ. ಶಿಕ್ಷಕರಾದವರು ಕೇವಲ ಶಾಲೆಯೊಳಗೆ ಸೀಮಿತರಾಗದೆ ಸಮುದಾಯದೊಂದಿಗೆ ಬೆರೆಯುವವರಾಗಿರಬೇಕು. ಈ ಗುಣವನ್ನು ಸಮರ್ಥವಾಗಿ ಬೆಳೆಸಿಕೊಂಡು ಶ್ರೀಯುತರು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. 

22-12-1961 ರಂದು ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮದ ವಿಷ್ಣುಮೂರ್ತಿ ದೇವರ ಸಾನಿಧ್ಯದಲ್ಲಿರುವ ಕರ್ವಾಲು ಕುಟುಂಬದಲ್ಲಿ ಶ್ರೀ ಕೆ.ಅನಂತಕೃಷ್ಣ ರಾವ್ ದಂಪತಿಗಳಿಗೆ ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಅನಂತಮತಿ ಹೆಕ್ಕಡ್ಕ ಶಾಲೆಯಲ್ಲಿ ಪಡೆದು ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಬೈಲೂರಿನ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿ, ಕೊಕ್ಕರ್ಣೆಯಲ್ಲಿ ಶಿಕ್ಷಕ ತರಬೇತಿಯನ್ನು ಪಡೆದುಕೊಂಡರು.

15-03-1996ರಲ್ಲಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆ. ಪಳ್ಳಿ, ಚಿಕ್ಕಲಬೆಟ್ಟು ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕಾರ್ಕಳ ಬಿ.ಆರ್.ಸಿ.ಯಲ್ಲಿ ಸಮನ್ವಯ ಶಿಕ್ಷಣದ ಐ.ಇ.ಆರ್.ಟಿ.ಯಾಗಿ ವಿಕಲ ಚೇತನ ಮಕ್ಕಳ ಸೇವೆ ಸಲ್ಲಿಸಿ ಜನಾನುರಾಗಿಯಾದರು. ಕಾರ್ಕಳದ ಸಾಕಷ್ಟು ಮಕ್ಕಳಿಗೆ ಮೆಡಿಕಲ್ ಕ್ಯಾಂಪ್ ಮೂಲಕ ವಿಕಲ ಚೇತನ ಗುರುತಿನ ಚೀಟಿ ಮಾಡಿಸಿ ಮಾಸಿಕ ಪಿಂಚಣಿ ಪಡೆಯುವರೇ ಶ್ರೀಯುತರ ಸೇವೆ ಶ್ಲಾಘನೀಯ. ನಂತರ ಕಾರ್ಕಳ ವಲಯದ ಶಿಕ್ಷಣ ಸಂಯೋಜಕರಾಗಿ ಪ್ರಭಾರ ವಹಿಸಿ ಉತ್ತಮ ಸೇವೆಯನ್ನು ಸಲ್ಲಿಸಿದರು. ನಂತರ ನೆಲ್ಲಿಕಟ್ಟೆ ಶಾಲೆಗೆ ವರ್ಗಾವಣೆಗೊಂಡು ಪ್ರಸ್ತುತ ಬೈಲೂರು ಕ್ಲಸ್ಟರ್ ವ್ಯಾಪ್ತಿಯ ಎಲಿಯಾಳ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.  

ಈ ಶಾಲೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ನಿರಂತರವಾಗಿ ಜನರ, ಜನಪ್ರತಿನಿಧಿಗಳ ಸಂಪರ್ಕವನ್ನು ಇಟ್ಟುಕೊಂಡು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವಲ್ಲಿ ತುಂಬಾ ಶ್ರಮ ಪಟ್ಟಿದ್ದಾರೆ. ಸರಕಾರದ ಹೇರಳ ಅನುದಾನಗಳನ್ನು ತರಿಸುವುದರ ಮೂಲಕ ಶಾಲೆಯ ಎಲ್ಲಾ ತರಗತಿಗಳಿಗೆ ಟೈಲ್ಸ್ ಅಳವಡಿಕೆ, ಶಾಲಾ ಅಂಗಣಕ್ಕೆ ಗಣೇಶೋತ್ಸವ ಸಮಿತಿಯ ಮೂಲಕ ಸುಸಜ್ಜಿತ ಚಪ್ಪರದ ವ್ಯವಸ್ಥೆ,  ಕ್ವೆಸ್ಟ್ ಸಂಸ್ಥೆಯ ಮೂಲಕ ಶಾಲೆಗಳಿಗೆ ಕಂಪ್ಯೂಟರ್, ಪ್ರಿಂಟರ್, ಪ್ರೊಜೆಕ್ಟರ್ ಮೂಲಕ ಇ-ಲರ್ನಿಂಗ್ ವ್ಯವಸ್ಥೆ, ನಿರಂತರ ಇಂಟರ್ನೆಟ್ ವ್ಯವಸ್ಥೆ, ಸುಸಜ್ಜಿತವಾದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಕ್ರೀಡಾ ಸಾಮಾಗ್ರಿಗಳ ವ್ಯವಸ್ಥೆ, ಬಾಲಕರ ಹೈಟೆಕ್ ಮೂತ್ರಾಲಯ ವ್ಯವಸ್ಥೆ, ಮೈದಾನದಲ್ಲಿ ಸೋಲಾರ್ ಲ್ಯಾಂಪ್ ಅಳವಡಿಕೆ, ಸುಂದರ ಶಾಲಾ ಮುಖದ್ವಾರ, ಶಿಕ್ಷಕರಿಗೆ ಶೌಚಾಲಯದ ವ್ಯವಸ್ಥೆ, ಸಂಪೂರ್ಣ ಆವರಣ ಗೋಡೆ, ಇನ್ನಿತರ ಸಾಕಷ್ಟು ವ್ಯವಸ್ಥೆಗಳನ್ನು ಮಾನ್ಯ ಶಾಸಕರ, ಜನಪ್ರತಿನಿಧಿಗಳ ಮತ್ತು ದಾನಿಗಳ ಸಹಕಾರದಿಂದ ಶಾಲೆಗೆ ಮಾಡಿಸಿಕೊಂಡಿದ್ದಾರೆ. ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವನ್ನಿರಿಸಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿದ್ದು ನಿರಂತರ ಸೇವೆ, ಬೈಲೂರು ರಾಮ ಮಂದಿರದ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಸುಧೀರ್ಘ ಸೇವೆ, ಸಾಂಸ್ಕೃತಿಕ ರಂಗದಲ್ಲಿ ಹಲವು ನಾಟಕ ಸಂಸ್ಥೆಗಳಲ್ಲಿ ನಟನೆಯಲ್ಲಿಯೂ ಸೈ, ಅತ್ಯುತ್ತಮ ಚಂಡೆ ಬಳಗದ ವಾದಕರು, ಉತ್ತಮ ಭಜನಾಕಾರರು, ಯಕ್ಷಪ್ರೇಮಿ, ಕ್ರೀಡಾ ಸಂಘಟಕರು, ಕ್ರಿಯಾಶೀಲ ವ್ಯಕ್ತಿತ್ವದ ಸೃಜನಶೀಲ ಆದರ್ಶ ಶಿಕ್ಷಕರು ಇವರಾಗಿದ್ದಾರೆ. 

ಶಾಲಾ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶಾಸಕರ ಕನಸಿನ ಎಂಕ್ಲೆನ ಪೆರ್ಮೆದ ಸ್ವರ್ಣ ಕಾರ್ಲ ಶಾಲೆಯಡಿ ಸುಸಜ್ಜಿತವಾದ ವಿಕ್ರಮಶಿಲಾ ಗುರುಕುಲ ಮಾದರಿಯ ಕುಟೀರದ ವ್ಯವಸ್ಥೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಸಾರಥ್ಯದಲ್ಲಿ ಇಂಗ್ಲೀಷ್ ಶಿಕ್ಷಕಿಯನ್ನ ನೇಮಿಸಿ ಗುಬ್ಬಚ್ಚಿ ಸ್ಪೋಕನ್ ಇಂಗ್ಲೀಷ್ ತರಗತಿ ವ್ಯವಸ್ಥೆ, ಬೃಹತ್ ನಿಲುಗನ್ನಡಿಯ ವ್ಯವಸ್ಥೆಯಂತಹ ಸಾಕಷ್ಟು ಅಭಿವೃದ್ಧಿ ಕಾರ್ಯಗಳು. ಶಾಲಾ ಅಮೃತ ಮಹೋತ್ಸವ ಪ್ರಯುಕ್ತ ವಿವೇಕಾನಂದ ಜನ್ಮ ದಿನಾಚರಣೆಯಂದು ಕ್ಲಸ್ಟರ್ ಮಟ್ಟದ ಚಿಣ್ಣರ ಲೋಕ ಕಾರ್ಯಕ್ರಮ, ಪರಿಸರ ಜಾಗ್ರತಿಯ ಉರಗ ಪ್ರೇಮಿ ಗುರುರಾಜ ಸನಿಲ್ ರಿಂದ “ಹಾವು ನಾವು” ಕಾರ್ಯಕ್ರಮ, ವಿದ್ಯಾರ್ಥಿ ಮತ್ತು ಪೋಷಕರಿಗಾಗಿ ಪೋಲೀಸ್ ಸಂಪರ್ಕ ಸಭೆ, ಶಾಲಾ ವಾರ್ಷಿಕ ಕ್ರೀಡಾಕೂಟ, ಬಾರತ ಮಾತೆಯ ಪೂಜನದೊಂದಿಗೆ ದೀಪಾವಳಿ ಉತ್ಸವ, ಮುಂತಾದ ಯಶಸ್ವೀ ಕಾರ್ಯಕ್ರಮಗಳ ಯೋಜನೆಗಳ ಮೂಲಕ ಶಾಲೆಯ ದಾಖಲಾತಿಯಲ್ಲಿ ಗಣನೀಯ ಹೆಚ್ಚಳವಾಗಿದೆ. ಶಾಲಾ ಶಿಕ್ಷಕ ವೃಂದದ ಸಹಕಾರದೊಂದಿಗೆ ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮತ್ತು ಪೂರ್ವ ವಿದ್ಯಾರ್ಥಿ ಸಂಘದ ಸಹಕಾರದ ಮೂಲಕ ಉತ್ತಮ ಶೈಕ್ಷಣಿಕ ಪರಿಸರ ನಿರ್ಮಾಣವಾಗಿದೆ. 

ಇತ್ತೀಚಿನ ಕೋವಿಡ್ ಕರ್ತವ್ಯದಲ್ಲಿಯೂ ನಿವೃತ್ತಿಯ ಅಂಚಿನಲ್ಲಿದ್ದರೂ ಎದೆಗುಂದದೆ ತಾಲೂಕಿನ ದೊಡ್ಡ ಕ್ವಾರಂಟೈನ್ ಸೆಂಟರ್.ನಲ್ಲಿ ನಿರಂತರ ಸೇವೆ, ಚೆಕ್ ಪೋಸ್ಟ್ ಡ್ಯೂಟಿಗೂ ಸೈ. ಹೀಗೆ ಸೇವಾಧಿಯ ಅಂಚಿನಲ್ಲಿದ್ದರೂ ಕಡಿಮೆಯಾಗದ ಜೀವನೋತ್ಸಾಹ, ಏನಾದರೂ ಸಾಧಿಸಬೇಕೆಂಬ ತುಡಿತ, ಯಾರೂ ಏನೇ ಕೇಳಿದರೂ ಇಲ್ಲವೆನ್ನದಿರುವ ಅಪರೂಪದ ಸ್ವಭಾವ ಇವರದ್ದು. ಇವರ ಪದಕೋಶದಲ್ಲಿ “ಇಲ್ಲ” ಎನ್ನುವ ಶಬ್ದವೇ ಇಲ್ಲ. ರಾಷ್ಟ್ರೀಯ ಮಟ್ಟದ ಸಾಧಕಿ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಶಶಿಕಲಾದೇವಿಯವರ ಮಡದಿಯಾಗಿ ಜೀವನ ಸಾರಥ್ಯ. ಮುದ್ದು ಮಕ್ಕಳಿಬ್ಬರ ತುಂಬು ಸಂಸಾರ. ನೆಮ್ಮದಿಯ ಜೀವನ.

ಇಷ್ಟೆಲ್ಲಾ ಸಾಧನೆಗಳ ಮೂಲಕ ಬಹುಮುಖ ವ್ಯಕ್ತಿತ್ವದ ಆದರ್ಶ ಶಿಕ್ಷಕ ಶ್ರೀ ಸತೀಶ್ ರಾವ್ ಕರ್ವಾಲು ಶಿಕ್ಷಕ ದಿನಾಚರಣೆಯ ಸದಾವಸರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೀಡಲ್ಪಡುವ ಉಡುಪಿ ಜಿಲ್ಲಾ ಮಟ್ಟದ “ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದ್ದಾರೆ.ಮುಂದೆಯೂ ಶಿಕ್ಷಣ ರಂಗದಲ್ಲಿ ಸಾಕಷ್ಟು ಸಾಧನೆಗಳು ಮುಂದುವರೆಯಲಿ. 

 

ಜಾಹೀರಾತು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget