ಇಂದಿನ ಉದ್ಯೋಗ ಮಾರುಕಟ್ಟೆಯ ಪೈಪೋಟಿಯನ್ನು ಎದುರಿಸಿ ಯಶಸ್ವಿಯಾಗಲು ಹೆಚ್ಚುವರಿ ಕೌಶಲ್ಯದ ಅಗತ್ಯವಿರುತ್ತದೆ. ಜಿ.ಎಸ್.ಟಿ ತರಬೇತಿಯು ಈ ನಿಟ್ಟಿನಲ್ಲಿ ಪೂರಕವಾಗಿದೆ ಎಂದು ಶ್ರೀ ಡೇವಿಡ್ ಡಿಮೆಲ್ಲೊ ಅಭಿಪ್ರಾಯಪಟ್ಟರು. ಇವರು ಕಾರ್ಕಳದ ಎಂ.ಪಿ.ಎ೦ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಹಾಗೂ ಸ್ಮಾರ್ಟ್ ಪ್ರೊಫೆಶನಲ್ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ನ ಸಹಯೋಗದೊಂದಿಗೆ ಆಯೋಜಿಸಲಾದ ಜಿ.ಎಸ್.ಟಿ ಸರ್ಟಿಫಿಕೇಟ್ ಕೋರ್ಸಿನ ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತಿಮ ಪದವಿ ವಿದ್ಯಾರ್ಥಿಗಳಿಗಾಗಿ ರೂಪಿಸಲಾದ ಆಫ್ ಲೈನ್ ಹಾಗೂ ಆನ್ಲೈನ್ ವೇದಿಕೆಗಳಲ್ಲಿ ನಡೆಯಲಿರುವ ಈ ಕೋರ್ಸಿನ ರೂಪುರೇಷೆಗಳ ಬಗ್ಗೆ ಇನ್ನೋರ್ವ ತರಬೇತುದಾರರಾದ ಶ್ರೀ ಆಲ್ಬನ್ ಆಂತೋನಿ ಪಿರೇರ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀವರ್ಮ ಅಜ್ರಿ ಎಂ ಮಾತನಾಡಿ ವಿದ್ಯಾರ್ಥಿಗಳು ಇಂತಹ ಹೆಚ್ಚುವರಿ ತರಬೇತಿಗಳನ್ನು ಪಡೆದುಕೊಂಡು ಉತ್ತಮ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ನ ಸಂಚಾಲಕರಾದ ಸುಷ್ಮಾ ರಾವ್ ಕೆ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಇನ್ನೋರ್ವ ಸಂಚಾಲಕರಾದ ಸಂಧ್ಯಾ ಭಂಢಾರಿ ವಂದಿಸಿದರು.
Post a comment