ಪುಣೆ,ಅ.23:"ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದ ಸಂದರ್ಭದಿಂದ ಇದುವರೆಗೆ ನಮ್ಮ ಸಂಘದ ಮುಖಾಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದೆ ಇರಬಹುದು . ಆದರೆ ನಮ್ಮ ಸಮಾಜಬಾಂಧವರ ಕಷ್ಟಸುಖಗಳಲ್ಲಿ ಸ್ಪಂದಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ . ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಉದ್ಯೋಗ ವ್ಯವಹಾರಗಳನ್ನು ಮುಚ್ಚಿ ಮನೆಯಲ್ಲಿಯೇ ಇರಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಸಂಕಷ್ಟ ದಲ್ಲಿದ್ದರು . ನಮ್ಮ ಸಂಘದ ಮುಖಾಂತರ ಕಷ್ಟದಲ್ಲಿರುವ ಬಂಧುಗಳನ್ನು ಗುರುತಿಸಿ ಸಾಧ್ಯವಾದರಷ್ಟು ನೆರವನ್ನು ನೀಡಿದ ತೃಪ್ತಿ ನಮಗಿದೆ.ಅದೇ ರೀತಿ ಸಂಘವು ಪ್ರತೀ ವರ್ಷ ಸಮಾಜಬಾಂಧವರನ್ನು ಒಟ್ಟು ಸೇರಿಸಿ ದಸರಾ ಹಬ್ಬ ವನ್ನು ಸಂಭ್ರಮದಿಂದ ಆಚರಿಸುತ್ತಿದ್ದು ಪ್ರಸ್ತುತ ಪರಿಸ್ಥಿತಿಯಲ್ಲಿ ಸರಕಾರದ ನಿಯಮಾವಳಿಯಂತೆ ಈ ವರ್ಷ ಸರಳವಾಗಿ ಪೂಜೆ ,ತೆನೆಹಬ್ಬವನ್ನು ಆಚರಿಸುತ್ತಿದ್ದೇವೆ . ಸಂಘದ ಸಾಮಾಜಿಕ ಕಾರ್ಯಗಳೊಂದಿಗೆ ಧಾರ್ಮಿಕ ನಂಬಿಕೆಗಳನ್ನು ಆಚರಿಸುವುದೂ ಸಂಘದ ಆದ್ಯತೆಯಾಗಿದ್ದು ಮುಂದಿನ ದಿನಗಳಲ್ಲಿ ಸಂಘದ ಕಾರ್ಯಗಳು ಸಮಾಜಬಾಂಧವರ ಆಶೋತ್ತರದಂತೆ ನಿರಾತಂಕವಾಗಿ ಸಾಗಲಿದೆ" ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅಭಿಪ್ರಾಯಪಟ್ಟರು.
ಅವರು ಮಂಗಳವಾರ(ಅ 20)ರಂದು ಸಂಘದ ಭವನದಲ್ಲಿ ಆರತಿ ಶಶಿಕಿರಣ್ ಶೆಟ್ಟಿ ಚಾವಡಿಯಲ್ಲಿ ಸರಳವಾಗಿ ಆಚರಿಸಲ್ಪಟ್ಟ ಸಂಘದ ದಸರಾ ಪೂಜೆ ಹಾಗೂ ತೆನೆಹಬ್ಬದ ಸಂದರ್ಭ ಸೇರಿದ್ದ ಸೀಮಿತ ಸಂಖ್ಯೆಯ ಸಮಾಜ ಬಾಂಧವರನ್ನುದ್ದೇಶಿಸಿ ಮಾತನಾಡಿದರು .
ಮುಂದಿನ ದಿನಗಳಲ್ಲಿ ತೀವ್ರವಾಗಿ ಸಂಕಷ್ಟದಲ್ಲಿರುವ ನಮ್ಮ ಹೋಟೆಲ್ ಉದ್ಯಮ ಚೇತರಿಕೆ ಕಾಣುವಂತಾಗಲಿ ,ಎಲ್ಲರಿಗೂ ಆರೋಗ್ಯ ,ಸುಖ ಸಮೃದ್ಧಿ ಕರುಣಿಸಲಿ ಎಂದು ಶ್ರೀದೇವಿಯಲ್ಲಿ ಪ್ರಾರ್ಥಿಸೋಣ. ಕೊರೋನಾ ಸೋಂಕನ್ನು ತಡೆಗಟ್ಟುವಲ್ಲಿ ನಾವೆಲ್ಲರೂ ಮುಂಜಾಗರೂಕತೆಯಿಂದ ಸಾಮಾಜಿಕ ಜಾಗೃತಿಯನ್ನು ಮೂಡಿಸಿಕೊಂಡು ನಮ್ಮ ಪರಿವಾರವನ್ನು ಸಂರಕ್ಷಿಸುವಲ್ಲಿ ತೊಡಗಿಸಿಕೊಳ್ಳಬೇಕಾಗಿದೆ . ಸಂಘದ ಮೂಲಕ ಸಮಾಜಬಾಂಧವರ ಮಕ್ಕಳಿಗೆ ಶೈಕ್ಷಣಿಕ ನೆರವನ್ನು ವಿತರಿಸುವ ಕಾರ್ಯವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳುವ ಯೋಜನೆ ಇದೆ . ಸಮಾಜಬಾಂಧವರ ಸಹಕಾರ ಅಗತ್ಯ ಎಂದರು.
ಈ ಸಂದರ್ಭ ಕೊರೋನಾ ಜಾಗೃತಿ ಮೂಡಿಸುವ ಸಲುವಾಗಿ ಕೋಲ್ಕತ್ತಾ ದಿಂದ ಪಾದಯಾತ್ರೆಯ ಮೂಲಕ ಸುಮಾರು 3200 ಕಿಮೀ ಕ್ರಮಿಸಿ ಪುಣೆಗೆ ತಲುಪಿದ ಠಾಕುರ್ ದಾಸ್ ಸಸ್ಮಾಲ್ ಇವರನ್ನು ಸಂಘದ ವತಿಯಿಂದ ಶಾಲು ಹೊದೆಸಿ ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಂಗವಾಗಿ ವೇದಮೂರ್ತಿ ಹರೀಶ್ ಭಟ್ ರವರು ಧಾರ್ಮಿಕ ಪೂಜೆಯನ್ನು ನೆರವೇರಿಸಿದರು . ಸಂತೋಷ್ ಶಹೆಟ್ಟಿ ಹಾಗೂ ದಿವ್ಯಾ ಸಂತೋಷ್ ಶೆಟ್ಟಿ ದಂಪತಿಗಳು ಪೂಜಾ ವಿಧಿಗಳಲ್ಲಿ ಭಾಗವಹಿಸಿದರು . ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಹಾಗೂ ಸದಸ್ಯರು ಆರತಿ ಬೆಳಗಿ ದೇವಿಯನ್ನು ಪೂಜಿಸಿ ಪ್ರಾರ್ಥಿಸಿದರು.
ಸಂತೋಷ್ ಶೆಟ್ಟಿಯವರು ಭತ್ತದ ತೆನೆಗಳನ್ನು ಹೊತ್ತು ತಂದು ಸಾಂಪ್ರದಾಯಿಕವಾಗಿ ತುಳಸಿ ಕಟ್ಟೆಯಲ್ಲಿಟ್ಟು ಪೂಜಿಸಿದರು.ಸಂಘದ ಪದಾಧಿಕಾರಿ ವಿಶ್ವನಾಥ ಶೆಟ್ಟಿ ಹಾಗೂ ಸಂಧ್ಯಾ ವಿ ಶೆಟ್ಟಿಯವರು ಭವನದ ಆವರಣದಲ್ಲಿರುವ ಛತ್ರಪತಿ ಶಿವಾಜಿ ಪ್ರತಿಮೆಗೆ ಹಾರಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಮತ್ತು ಪದಾಧಿಕಾರಿಗಳು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಸತೀಶ್ ಶೆಟ್ಟಿ ಮತ್ತು ಸದಸ್ಯರು ,ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ ಮತ್ತು ಪದಾಧಿಕಾರಿಗಳು ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು . ಕಾರ್ಯಕ್ರಮದ ಕೊನೆಗೆ ಹೊಸ ಅಕ್ಕಿ ಊಟದ (ಪುದ್ವಾರ್ )ವ್ಯವಸ್ಥೆಯನ್ನು ಮಾಡಲಾಗಿತ್ತು.
Post a comment