ಮೈಸೂರು,ಅ.25: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೂಂಡಾ ರಾಜಕಾರಣ ಮಾಡುತ್ತಿದ್ದಾರೆ. ಆರ್ ಆರ್ ನಗರದ ಉಪಚುನಾವಣೆಯಲ್ಲೂ ಗೂಂಡಾಗಿರಿ ಮೂಲಕ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರ್ ಆರ್ ನಗರ ಕ್ಷೇತ್ರದಲ್ಲಿ ಡಿ ಕೆ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ಸಂಸದರಾಗಿದ್ದು, ಎಲ್ಲಾ ಗೂಂಡಾಗಳನ್ನು ಬಳಸಿಕೊಂಡು ಕಾನೂನು ಸುವ್ಯವಸ್ಥೆ ಹದಗೆಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಉಚಿತವಾಗಿ ಕೊರೋನಾ ಲಸಿಕೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವುದರಲ್ಲಿ ತಪ್ಪೇನಿಲ್ಲ. ಬಿಹಾರ ಮಾತ್ರವಲ್ಲ ಎಲ್ಲ ಕಡೆಗಳಲ್ಲೂ ಉಚಿತವಾಗಿ ಲಸಿಕೆ ಹಂಚಲಾಗುವುದು. ಇದರ ವೆಚ್ಚವನ್ನು ಸರಕಾರವೇ ಭರಿಸಲಿ ಎಂದರು.
ಮಾವುತರಿಗೆ ಆಹಾರ:
ಸಂಸದೆ ಶೋಭಾ ಕರಂದ್ಲಾಜೆ ಶನಿವಾರ ಅರಮನೆ ಆವರಣದಲ್ಲಿ ದಸರಾ ಆನೆ ಮಾವುತರಿಗೆ ಹಾಗೂ ಕಾವಾಡಿಗರಿಗೆ ಉಪಹಾರ ನೀಡಿದರು. ಕಳೆದ 12 ವರ್ಷಗಳಿಂದ ಶೋಭಾ ಕರಂದ್ಲಾಜೆ ಆನೆ ಮಾವುತರಿಗೆ ಹಾಗೂ ಕಾವಾಡಿಗರಿಗೆ ಉಪಹಾರ ನೀಡುತ್ತಾ ಬಂದಿದ್ದಾರೆ. ಅಂತೆಯೇ ಈ ಬಾರಿಯೂ ಉಪಹಾರ ನೀಡಿದ್ದಾರೆ. ಸ್ವತಃ ಶೋಭಾ ಕರಂದ್ಲಾಜೆಯವರು ಮಾವುತರಿಗೆ ಕಾವಾಡಿಗರಿಗೆ ಉಣ ಬಡಿಸಿದರು. ಬಳಿಕ ದಸರಾ ಗಜಪಡೆಗೆ ತೆರಳಿ ಕಬ್ಬು, ಬೆಲ್ಲ ನೀಡಿ, ಮಾವುತರು ಹಾಗೂ ಕಾವಾಡಿಗರ ಯೋಗ ಕ್ಷೇಮ ವಿಚಾರಿಸಿದರು. ಈ ಸಂದರ್ಭ ಮೂಡಾ ಅಧ್ಯಕ್ಷ ಎಚ್ ವಿ ರಾಜೀವ್ ಇದ್ದರು.
Post a comment