ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಕಾಂತಾವರದ ಉಪ ಆರೋಗ್ಯಕೇಂದ್ರ: ನಿಷ್ಕ್ರಿಯ ಜನಪ್ರತಿನಿಧಿಗಳು, ದಿವ್ಯಮೌನವಹಿಸಿರುವ ಅಧಿಕಾರಿಗಳು ಕಂಗಾಲಾದ ಗ್ರಾಮಸ್ಥರು-Times Of Karkala

ಕಾಂತಾವರ ಗ್ರಾಮದಲ್ಲಿರುವ ಈ ಉಪ ಆರೋಗ್ಯ ಕೇಂದ್ರ ಉದ್ಘಾಟನೆಯಾಗಿ ಬರೊಬ್ಬರಿ 9 ವರ್ಷಗಳು ಕಳೆದವು. ಸರಳ ಸಜ್ಜನ ಶಾಸಕರಾದ ದಿವಂಗತ ಗೋಪಾಲ ಭಂಡಾರಿಯವರು ಬಡವರಿಗೂ ಆರೋಗ್ಯ ಸೇವೆ ಸಿಗುವಂತಾಗಬೇಕು ಎನ್ನುವ ದೃಷ್ಟಿಯಿಂದ ತಮ್ಮ ಶಾಸಕತ್ವದ ಅವಧಿಯಲ್ಲಿ ವಿಶೇಷ ಮುತುವರ್ಜಿ ವಹಿಸಿ ನಿರ್ಮಾಣ ಮಾಡಿದ ಉಪ ಆರೋಗ್ಯ ಕೇಂದ್ರವು 2011 ರ ಜೂನ್ 24 ರಂದು ಉದ್ಘಾಟನೆಗೊಂಡಿತು. ಉದ್ಘಾಟನೆಗೊಂಡ ಆರಂಭದಲ್ಲಿ ಚೆನ್ನಾಗಿಯೇ ಕಾರ್ಯನಿರ್ವಹಿಸಿದ ಈ ಉಪ ಆರೋಗ್ಯ ಕೇಂದ್ರವು ಕೆಲವೇ ಸಮಯದಲ್ಲಿ ನಿಷ್ಕ್ರಿಯವಾಯಿತು. 2011 ರಲ್ಲಿ ವೈದ್ಯಕೀಯ ಸೇವಾ ವಿಚಾರದಲ್ಲಿ ಸುವರ್ಣ ಗ್ರಾಮದಂತಿದ್ದ ಕಾಂತಾವರವು ಸದ್ಯ ಆರೋಗ್ಯ ಸೇವೆ ವಂಚಿತವಾಗಿ ಕುಗ್ರಾಮದಂತೆ ಆಗಿರುವುದು ನಮ್ಮ ಗ್ರಾಮಸ್ಥರ ದೌರ್ಭಾಗ್ಯ. 25 ರಿಂದ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಸುಸಜ್ಜಿತ ಆರೋಗ್ಯ ಕೇಂದ್ರವು ಸದ್ಯ ಯಾರಿಗೂ ಉಪಯೋಗವಿಲ್ಲದ ಕಟ್ಟಡದಂತಾಗಿದೆ. ಕಾಂತಾವರ ಗ್ರಾಮವು ತೀರಾ ಗ್ರಾಮೀಣ ಪ್ರದೇಶವಾಗಿದ್ದು ತುರ್ತು ಆರೋಗ್ಯದ ಸಮಸ್ಯೆಗಳಿಗೆ ಗ್ರಾಮಸ್ಥರು 20 Km ದೂರದ ನಗರ ಪ್ರದೇಶಕ್ಕೆ ತೆರಳಬೇಕಿದೆ. ಕೊರೊನ ಲಾಕ್ಡೌನ್ ಸಂದರ್ಭದಲ್ಲಂತೂ ಗ್ರಾಮಸ್ಥರು ಚಿಕಿತ್ಸೆಗಾಗಿ  ತೀವ್ರ ಸಂಕಷ್ಟ ಅನುಭವಿಸಿದ್ದರು. ಯುವ ಜನರು ಸ್ವಂತ ವಾಹನದಲ್ಲಿಯೋ ಅಥವಾ ಬೇರೆ ಹೇಗಾದರೂ ನಗರ ಪ್ರದೇಶದ ಆಸ್ಪತ್ರೆಗಳಿಗೆ ತೆರಳುತ್ತಾರೆ, ಆದರೆ ಹಿರಿಯರು, ಮಹಿಳೆಯರು, ಮಕ್ಕಳು ಚಿಕಿತ್ಸೆಗಾಗಿ ನಿಟ್ಟೆ, ಬೆಳುವಾಯಿ, ಕಾರ್ಕಳ ಮುಂತಾದ ಭಾಗಗಳಿಗೆ ಹೋಗಲು ತುಂಬಾ ಕಷ್ಟ ಪಡಬೇಕಾಗಿತ್ತು. ಉಡುಪಿಯಂತಹ ಬುದ್ದಿವಂತರ‌ ಸುಶಿಕ್ಷಿತರ ಜಿಲ್ಲೆಯಲ್ಲಿಯೆ ಜನರು ಮೂಲಭೂತ ಅವಶ್ಯಕತೆಗಳಿಗೆ ಈ ಪರಿ ಬವಣೆ ಪಡುತ್ತಿದ್ದಾರೆಯೆಂದರೆ ಗ್ರಾಮದ ಆಡಳಿತ ವ್ಯವಸ್ಥೆ ನಾಚಿಕೆ ಪಡಬೇಕು.


ಮನೆಯ ಮಕ್ಕಳು ನಿತ್ಯ ಕಸುಬಿಗಾಗಿ ದೂರದೂರಿಗೆ ಹೋದಾಗ, ಉದ್ಯೋಗ ನಿಮಿತ್ತ ನಗರ ಪ್ರದೇಶದಲ್ಲಿ ನೆಲೆಸಿದ್ದರೆ ಅಂತವರ ಮನೆಯ ವೃದ್ದರು, ಮಹಿಳೆಯರು ಪ್ರಥಮ ಚಿಕಿತ್ಸೆಗಾಗಿ ಸ್ವಂತ ವಾಹನದ ವ್ಯವಸ್ಥೆ ಇಲ್ಲದೇ ದೂರದ ಆಸ್ಪತ್ರೆಗಳಿಗೆ  ಸಂಚರಿಸಲು ಹೇಗೆ ಸಾದ್ಯ..? ಗ್ರಾಮದ ಜನರಿಗೆ ಆರೋಗ್ಯ ಸೇವೆ ಸಿಗಬೇಕು ಎನ್ನುವ ಉದ್ದೇಶದಿಂದಲೇ ನಿರ್ಮಾಣವಾಗಿರುವ ಈ ಸುಸಜ್ಜಿತ ಉಪ ಆರೋಗ್ಯ ಕೇಂದ್ರವು ಇಂದು ವೈದ್ಯರಿಲ್ಲದೇ, ಆರೋಗ್ಯ ಸಿಬ್ಬಂದಿಯಿಲ್ಲದೇ ನಿಷ್ಕ್ರೀಯವಾಗಿದೆ. ಇಷ್ಟೊಂದು ದೊಡ್ಡ ಆರೋಗ್ಯ ಕೇಂದ್ರವಿದ್ದರೂ ಜನ ಸಾಮಾನ್ಯರಿಗೆ ನೆಗಡಿ ಶೀತವಾದರೂ ಔಷದಿ ದೊರೆಯದಂತ ದುರವಸ್ತೆ ಕಾಂತಾವರ ಗ್ರಾಮದಲ್ಲಿದೆ, ಜನಪ್ರತಿನಿಧಿಗಳ ನಿರ್ಲಕ್ಷಕ್ಕೆ ಒಳಗಾದರೆ ಒಂದು ಗ್ರಾಮೀಣ ಪ್ರದೇಶವು ಏನಾಗುತ್ತದೆ ಎನ್ನುವುದಕ್ಕೆ ಕಾಂತಾವರ ಗ್ರಾಮದ ಉಪ ಆರೋಗ್ಯ ಕೇಂದ್ರವೇ ಸಾಕ್ಷಿ. 


ಸರ್ಕಾರ ಯಾವುದೇ ಇರಲಿ ಗ್ರಾಮದ ಜನರ ಮೂಲಭೂತ ಆದ್ಯತೆಗಳ ವಿಚಾರದಲ್ಲಿ ರಾಜಕೀಯ ಮಾಡದೇ, ಪರಸ್ಪರ ಕೆಸರೆರಚಾಟ ಮಾಡದೇ ಜನಪರ ಕೆಲಸದಲ್ಲಿ ತೊಡಗುವಂತಹ ಜನಪ್ರತಿನಿಧಿಗಳ ಅವಶ್ಯಕತೆ ಇದೆ. ಮನುಷ್ಯನಿಗೆ ಅತ್ಯಂತ ಅವಶ್ಯಕ ಮೂಲಭೂತ ಆದ್ಯತೆಗಳಾದ ಆಹಾರ, ಉದ್ಯೋಗ, ಆರೋಗ್ಯ ಈ ವಿಚಾರದಲ್ಲಿ ಜನಪ್ರತಿನಿಧಿಗಳು ಆಲಸ್ಯ ತೋರುವುದು, ನಿರ್ಲಕ್ಷವಹಿಸುವುದು ಇದು ಗ್ರದ ಜನರಿಗೆ ಮಾತ್ರವಲ್ಲ ದೇಶಕ್ಕೇ ಮಾಡುವ ದ್ರೋಹವಾಗಿದೆ.


ವಿಶ್ವವನ್ನೆ ನಡುಗಿಸಿದ ಕೊರಾನ ಮಹಾಮಾರಿಯಿಂದಾಗಿ ಜನ ಜೀವನ ದುಸ್ತರವಾಗಿದೆ, ಇಂದು ಯುವ ಜನತೆ ಉದ್ಯೋಗವಿಲ್ಲದೇ, ಹಣದ ಸಮಸ್ಯೆಯಿಂದ ದಿನ ದೂಡುತ್ತಿದ್ದಾರೆ. ಆರೋಗ್ಯ ಸಮಸ್ಯೆ ಬಂದಾಗ ದೂರದ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವಷ್ಟೂ ಹಣಕಾಸಿನ ತೀವ್ರ ಮುಗ್ಗಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಗ್ರಾಮದಲ್ಲಿರುವ ಒಂದು ಸರ್ಕಾರಿ ಆಸ್ಪತ್ರೆಯು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಇದರಿಂದ ಗ್ರಾಮದ ಬಡಜನರಿಗೆ, ಪ್ರತಿಯೊಬ್ಬರಿಗೂ ಉಪಯೋಗವಾಗಲಿದೆ. 


ಕಾಂತಾವರ ಪಂಚಾಯತ್ ಆಡಳಿತವೂ ನಿರಂತರವಾಗಿ 15 ವರ್ಷಗಳಿಗೂ ಮಿಕ್ಕಿ ಬಿಜೆಪಿ ಬೆಂಬಲತರು ಆಡಳಿತ ನಡೆಸುತ್ತಿದ್ದಾರೆ, ಅಷ್ಟೇ ಅಲ್ಲದೇ ಆಡಳಿತಾತ್ಮಕ ವಿವಿಧ ಸ್ಥರಗಳಾದ ತಾಲೂಕು ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು, ಶಾಸಕರು, ಸಂಸದರು ಇವರೆಲ್ಲರೂ ಸದ್ಯ ಕೇಂದ್ರ ಹಾಗೂ ರಾಜ್ಯದಲ್ಲಿ  ಆಡಳಿತದಲ್ಲಿರುವ ಬಿಜೆಪಿ ಪಕ್ಷದ ಚುನಾಯಿತ ಸದಸ್ಯರೇ ಆಗಿದ್ದರೂ ಕಾಂತಾವರ ಗ್ರಾಮದ ಜನರ ಆರೋಗ್ಯ  ಸಮಸ್ಯೆಗೆ ಯಾವ ಸ್ಪಂದನೆಯೂ ಇಲ್ಲ. ಯಾವ ಜನಪ್ರತಿನಿಧಿಯ ಕಣ್ಣಿಗೂ ಈ ಆರೋಗ್ಯ ಉಪ ಕೇಂದ್ರ ಗೋಚರಿಸದೇ ಇರುವುದು ಗ್ರಾಮಸ್ಥರ ದೌರ್ಬಾಗ್ಯವೋ ಅಥವಾ ಜನಪ್ರತನಿಧಿಗಳ ನಿಷ್ಕ್ರಿಯತೆಯೋ ಆ ಕಾಂತೇಶ್ವರನೇ ಬಲ್ಲ. 


 ಇಲ್ಲಿನ ಜನ ಸಾಮಾನ್ಯರು ದಿನೇ ದಿನೇ ಆರೋಗ್ಯದ ಸೇವೆಗೆ ಊರೂರು ಅಲೆಯುತ್ತಿದ್ದಾರೆ, ಆರೋಗ್ಯ ಸಮಸ್ಯೆ ಇರುವವರು, ಬಡವರು ದುಡಿದ ಹಣವನ್ನು ಆರೋಗ್ಯಕ್ಕೆಂದು ಸುರಿಯುತ್ತಿದ್ದಾರೆ. ಸರ್ಕಾರ ಎಲ್ಲವನ್ನೂ ಕೊಟ್ಟಿದೆ, ರಸ್ತೆಗೆ ಸಮೀಪದಲ್ಲೇ ಇರುವ  ಸುಸಜ್ಜಿತ ಆಸ್ಪತ್ರೆ, ವಿಶಾಲವಾದ ಪಾರ್ಕಿಂಗ್ ಸ್ಥಳ ಇಷ್ಟೇಲ್ಲಾ ಇದ್ದರೂ ಜನಪ್ರತಿನಿಧಿಗಳ ಕೇವಲ ಪ್ರಚಾರದ ತೆವಳೊಂದು ಬಿಟ್ಟರೆ ಜನಪರ ಕಾಳಜಿಯೇ ಇಲ್ಲದಿರುವುದು,  ಇಚ್ಚಾಶಕ್ತಿಯ ಕೊರತೆಯಿಂದ ಬಹು ಜನೋಪಯೋಗಿ ಆರೋಗ್ಯ ಕೇಂದ್ರವೊಂದು ನಿಷ್ಕ್ರಿಯವಾಗಿ ನಿಸ್ತೇಜವಾಗಿದೆ. ತೆರಿಗೆ ಪಡೆಯುವ ಎಲ್ಲಾ ಅವಕಾಶಗಳನ್ನು ಬೆನ್ನುಬಿಡದೇ ಗ್ರಾಮಸ್ತರಿಂದ ವಸೂಲಿ ಮಾಡುವ ಆಡಳಿತ ವ್ಯವಸ್ಥೆಯು ಅದೇ ಜನರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೀಡುವಲ್ಲಿ ಮೀನವೇಷ ಎಣಿಸುತ್ತದೆ.    ಸುಮಾರು 3500 ರಿಂದ 4 ಸಾವಿರದಷ್ಟು ಜನ ಸಂಖ್ಯೆ  ಇರುವ ಕಾಂತಾವರ ಗ್ರಾಮಕ್ಕೊಬ್ಬರು ಆರೋಗ್ಯಾಧಿಕಾರಿ, ಆರೋಗ್ಯ ಕಾರ್ಯಕರ್ತರ‌ ಅವಶ್ಯಕತೆಯಿದ್ದು ಇದಕ್ಕೆ ಸಂಬಂದಪಟ್ಟ ಆರೋಗ್ಯಾಧಿಕಾರಿ, ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಗ್ರಾಮಸ್ತರ ಪರವಾಗಿ ವಿನಂತಿ.


🖋 ಪ್ರದೀಪ್ ಬೇಲಾಡಿ


ಜಾಹೀರಾತು
https://www.timesofkarkala.in/2020/10/blog-post_8.html


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget