ಉಡುಪಿ ಜಿಲ್ಲೆಯ ಅತೀ ಸುಂದರವಾದ ನದಿ ಸ್ವರ್ಣಾ. ಅದು ಅತೀ ಹೆಚ್ಚು ಕೃಷಿ ಭೂಮಿಗೆ ನೀರು ಉಣಿಸುವ ಮತ್ತು ಶುದ್ದ ಕುಡಿಯುವ ನೀರನ್ನು ಒದಗಿಸುವ ನದಿ. ಅದರ ಉಗಮ ಆಗಿರುವುದು ಕಾರ್ಕಳದಲ್ಲಿ. ಈ ನದಿಯ ಪಾವಿತ್ರ್ಯತೆಯನ್ನು ಕಾಪಾಡುವ "ಸ್ವರ್ಣಾರಾಧನಾ" ಎಂಬ ಹೆಸರಿನ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದ್ದು ಹಲವು ಹಂತಗಳಲ್ಲಿ ನಡೆಯಲಿದೆ.
ಮೊದಲ ಹಂತದಲ್ಲಿ ಸ್ವರ್ಣಾ ನದಿಯು ಹರಿಯುವ ಪಾತ್ರದ ಐದು ಗ್ರಾಮಗಳನ್ನು ಸ್ಥಳೀಯ ಸಂಘಟನೆಗಳ ಮೂಲಕ ದತ್ತು ಸ್ವೀಕಾರ ಮಾಡಲಾಗಿದ್ದು ಮೊದಲ ಹಂತದಲ್ಲಿ ನದೀ ತೀರದ ಸ್ವಚ್ಚತೆ ಹಾಗೂ ಪ್ಲಾಸ್ಟಿಕ್ ಹೆಕ್ಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹೆರ್ಮುಂಡೆ, ಮುಂಡ್ಲಿ , ಮಾಳ, ತೆಳ್ಳಾರು, ಮೂಡಾರು ಈ ಐದು ಗ್ರಾಮಗಳಲ್ಲಿ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಸ್ವರ್ಣಾ ನದಿಯ ಪಾತ್ರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಮೊದಲ ಹೆಜ್ಜೆಯನ್ನು ಮಾಡುವುದಾಗಿ ನಿರ್ಧರಿಸಿ ಜೋಕುಲು ಬೆಟ್ಟು ಸಮೀಪ ಕಾರ್ಕಳದ ಸ್ವಚ್ಛತೆಯನ್ನು ಕಾರ್ಕಳ ಸ್ವರ್ಣ ರಾಧನ ತಂಡವು ಪೂರ್ಣಗೊಳಿಸಿದೆ. ಹಾಗೆಯೇ ಕಾರ್ಕಳ ಪುರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಚತಾ ಬ್ರಿಗೇಡ್, ರೋವರ್ಸ್ ಮತ್ತು ರೇಂಜರ್ಸ್, ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕಾರ್ಕಳ ರೋಟರಾಕ್ಟ್, ರೋಟರಿ ಆನ್ಸ್ ಕಾರ್ಕಳ ಮೊದಲಾದ ಸಂಸ್ಥೆಗಳ ಸಹಯೋಗದಲ್ಲಿ ನದೀ ಪಾತ್ರದ ಸ್ವಚ್ಛತೆಯ ಕಾರ್ಯವನ್ನು ಸಂಕಲ್ಪಿಸಲಾಗಿತ್ತು.
ಉಡುಪಿಯ ಜಲತಜ್ಞರಾದ ಡಾಕ್ಟರ್ ನಾರಾಯಣ ಶೆಣೈ ಅವರ ನೇತೃತ್ವದಲ್ಲಿ ಆರಂಭ ಆಗಿರುವ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮೂಡಾರು ಸಂಘಟನೆ, ಯುವಸ್ಪಂದನ ಗೆಳೆಯರ ಬಳಗ ಮುಂಡ್ಲಿ, ಹಸಿರೇ ಉಸಿರು ಸಂಘಟನೆ ತೆಳ್ಳಾರು, ಯೂತ್ ಬಿಲ್ಲವ ಕಾರ್ಕಳ ಮೊದಲಾದ ಸಂಘಟನೆಗಳು ಕೈ ಜೋಡಿಸಿವೆ. ನವೆಂಬರ್ 29ರ ಆದಿತ್ಯವಾರ ಮುಂಜಾನೆ ಸೂರ್ಯೋದಯಕ್ಕೆ ಮುಂಚೆಯೇ ಕಾರ್ಯವನ್ನು ಕೈಗೆತ್ತುಕೊಂಡು ಸಂಪೂರ್ಣವಾಗಿ ಮುಗಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಒಟ್ಟು 70 ಜನ ಸದಸ್ಯರು ಭಾಗವಹಿಸಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.


ಜಾಹೀರಾತು
