ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಕಾರ್ಕಳ ಹಾಗೂ ಎಂ.ಪಿ.ಎ೦ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಎನ್.ಎಸ್.ಎಸ್., ರೋವರ್ಸ್ ರೇಂಜರ್ಸ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಮಾಹಿತಿ ನೀಡಲಾಯಿತು.
ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಶ್ರೀವರ್ಮ ಅಜ್ರಿ ಎಂ. ರವರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ,’ಕೋವಿಡ್-೧೯ ನಮ್ಮೆಲ್ಲರ ಆರೋಗ್ಯದ ಕಾಳಾಜಿ ಹೆಚ್ಚಿಸಿದೆ. ವಿಶೇಷವಾಗಿ ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಚತೆ, ಪರಿಸರ ನೈರ್ಮಲ್ಯದ ಅವಶ್ಯಕತೆಯನ್ನು ಅರಿತು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವಂತೆ ತಿಳಿಸಿದರು. ಕಾರ್ಕಳ ತಾಲೂಕು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ| ಪ್ರಕಾಶ್ ಕುಮಾರ್ ಮಾಹಿತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಸಮಗ್ರವಾಗಿ ತಿಳಿಸಿ ದೇಶದ ಜನಸಾಮಾನ್ಯರಲ್ಲಿ ಆರೋಗ್ಯ ಕುರಿತಾದ ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆಯ ಪಾತ್ರವನ್ನು ವಿವರಿಸಿದರು.
ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ವಿಜಯ ಬಾಯಿ ಕೆ, ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಕೃಷ್ಣಮೂರ್ತಿ ವೈದ್ಯ ರವರ ಫಿಟ್ನೆಸ್ ಹಾಗೂ ಯೋಗ ಕುರಿತಾದ ಹೊಸ ಯು ಟ್ಯೂಬ್ ಚ್ಯಾನೆಲ್ಗೆ ಪ್ರಾಂಶುಪಾಲರು ಚಾಲನೆ ನೀಡಿದರು. ಗ್ರಂಥಪಾಲಕರಾದ ವೆಂಕಟೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್.ಎಸ್.ಎಸ್ . ಯೋಜನಾಧಿಕಾರಿ ನವೀನ್ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕರಾದ ಶಿವರಾಮ್ ರಾವ್ ವಂದಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್. ಕಾರ್ಯಕ್ರಮ ನಿರೂಪಿಸಿದರು.
Post a comment