ಕಾರ್ಕಳ,ನ.2:ಅಂತಾರಾಷ್ಟ್ರೀಯ ಹೈಜಂಪ್ ಆಟಗಾರ್ತಿ, ಕಾರ್ಕಳ ತಾಲೂಕಿನ ಕುಕ್ಕಜೆಯ ಅಭಿನಯ ಶೆಟ್ಟಿ ರಾಜ್ಯ ಸರಕಾರ ನೀಡಿರುವ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುಧಾಕರ ಶೆಟ್ಟಿ ಹಾಗೂ ಸಂಜೀವಿ ದಂಪತಿಗಳ ಪುತ್ರಿಯಾಗಿರುವ ಅಭಿನಯ ಅವರ ಕ್ರೀಡಾ ಕ್ಷೇತ್ರದ ಸಾಧನೆ ಗುರುತಿಸಿ ರಾಜ್ಯ ಸರಕಾರ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಆಳ್ವಾಸ್ ಕಾಲೇಜಿನ ಅಂತಿಮ ಬಿ ಕಾಂ ವಿದ್ಯಾರ್ಥಿನಿಯಾಗಿರುವ ಇವರು ಸದ್ಯ ಮುಂಬೈ ಪಶ್ಚಿಮ ರೈಲ್ವೆ ಉದ್ಯೋಗಿಯಾಗಿದ್ದಾರೆ. ವಸಂತ್ ಜೋಗಿ ಎರ್ಮಾಳು ಇವರ ಕೋಚ್ ಆಗಿದ್ದಾರೆ.
ಅಭಿನಯ ಶ್ರೀಲಂಕಾದಲ್ಲಿ ೨೦೧೮ರಲ್ಲಿ ನಡೆದ ಸೌತ್ ಏಶಿಯನ್ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ಶಿಪ್ ನಲ್ಲಿ ಕಂಚು, ೨೦೧೮ರಲ್ಲಿ ಜಪಾನಿನಲ್ಲಿ ನಡೆದ ಜೂನಿಯರ್ ಏಶಿಯನ್ ಅಥ್ಲೆಟಿಕ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ೨೦೧೯ರಲ್ಲಿ ಇಟಲಿಯಲ್ಲಿ ನಡೆದ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ ನಲ್ಲೂ ಭಾಗವಹಿಸಿದ್ದಾರೆ.
ರಾಷ್ಟೀಯ ಮಟ್ಟದ ಕ್ರೀಡಾ ಕೂಟದಲ್ಲಿ ಎರಡು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ.
Post a comment