ಹೆಬ್ರಿ ಸಿಟಿ ಲಯನ್ಸ್ ಕ್ಲಬ್ನಿಂದ ನಿರಂತರ ಸಮಾಜಸೇವೆ.
ಗ್ರಾಮದ ಅಭಿವೃದ್ಧಿಗಾಗಿ ನಕ್ಸಲ್ ಪೀಡಿತ ಪ್ರದೇಶಕ್ಕೆ ಸೌರಶಕ್ತಿಯ ಕೊಡುಗೆ.
ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಪ್ರಥಮ ಮಹಿಳಾ ಅಧ್ಯಕ್ಷೆ ತೆರೆಮರೆಯ ಸಮಾಜಸೇವಕಿ ಡಾ.ಭಾರ್ಗವಿ ಆರ್. ಐತಾಳ್ ನೇತ್ರತ್ವದಲ್ಲಿ ಕಳೆದ ೧ ವರ್ಷದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರಂತರವಾಗಿ ವಿವಿಧ ಕೊಡುಗೆ, ಶಾಶ್ವತ ಯೋಜನೆಗಳ ಅನುಷ್ಠಾನ ದ ಮೂಲಕ ಸಮಾಜಮುಖಿ ಕೆಲಸಗಳು ನಡೆಯುತ್ತಿದೆ.
ಸೇವೆಯ ಭಾಗವಾಗಿ ಶನಿವಾರ ನಕ್ಸಲ್ ಪೀಡಿತ ಪ್ರದೇಶವಾದ ಹೆಬ್ರಿ ತಾಲ್ಲೂಕು ಮಡಾಮಕ್ಕಿಯ ಕುಗ್ರಾಮವಾದ ಹಂಜದ ಎಡಮಲೆ ಮತ್ತು ಕರಿಮಲೆ ಎಂದು ೨ ಪ್ರದೇಶಗಳಿಗೆ ಸೌರಶಕ್ತಿ ಮತ್ತು ಎರಡು ಬಡ ಕುಟುಂಬಗಳಿಗೆ ಸೌರಶಕ್ತಿಯ ಹೊಲಿಗೆಯಂತ್ರವನ್ನು ಸೆಲ್ಕೋ ಪೌಂಡೇಶನ್ ಸಹಕಾರದಲ್ಲಿ ಕೊಡುಗೆಯಾಗಿ ನೀಡಲಾಯಿತು. ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಪ್ರಥಮ ಮಹಿಳಾ ಅಧ್ಯಕ್ಷೆ ಡಾ.ಭಾರ್ಗವಿ ಆರ್ ಐತಾಳ್ ತನ್ನ ಲಯನ್ಸ್ ತಂಡದೊಂದಿಗೆ ಸುಮಾರು 3 ಕೀಮಿ ದೂರ ನಡೆದುಕೊಂಡು ಹೋಗಿ ಕೊಡುಗೆಯನ್ನು ಹಸ್ತಾಂತರಿಸಿದರು.
ಒಂದು ಗ್ರಾಮದ ಅಭಿವೃದ್ಧಿ ಅದು ಆ ಊರಿನ ಒಂದು ಮನೆಯಿಂದ ಆರಂಭವಾಗಬೇಕು, ಅದಕ್ಕಾಗಿ ಲಯನ್ಸ್ ಮೂಲಕ ಹೆಜ್ಜೆಇಟ್ಟಿದ್ದೇವೆ. ದೂರವಾಣಿ, ರಸ್ತೆ ಸಹಿತ ಯಾವೂದೇ ಮೂಲ ಸೌಕರ್ಯವೂ ಇಲ್ಲದೆ ಈಗಲೂ ಇಲ್ಲಿ ಮನೆಮಂದಿ ಇದ್ದಾರೆ ಎಂದರೆ ಅದನ್ನು ಈ ಕಾಲದಲ್ಲಿ ನಂಬಲು ಅಸಾಧ್ಯ. ಗ್ರಾಮಾಭಿವೃದ್ಧಿ ಮತ್ತು ಸ್ವದ್ಯೋಗಿಗಳಿಗೆ ನಾವು ಪ್ರೇರಕರಾಗಿರಬೇಕು ಎಂಬುದು ನಮ್ಮ ಆಶಯ ಎಂದು ಡಾ.ಭಾರ್ಗವಿ ಐತಾಳ್ ಹೇಳಿದರು.
ಗೋವಿಗಾಗಿ ಮೇವು, ಗೋವಿಗಾಗಿ ನೀರು, ಬಡ ಕುಟುಂಗಳಿಗೆ ನೀರಿನ ಟ್ಯಾಂಕ್, ಬಡ ಕುಟುಂಬಗಳಿಗೆ ಸಹಾಯ, ಆರೋಗ್ಯ,ಶಿಕ್ಷಣಕ್ಕೆ ನೆರವು, ಅವಕಾಶ ವಂಚಿತರಿಗೆ ಮನೆ, ಶೌಚಾಲಯ ನಿರ್ಮಾಣ, ಅನಾಥಶ್ರಮಗಳಿಗೆ ನೆರವು, ಉಚಿತ ಆರೋಗ್ಯ ಮತ್ತು ಮಧುಮೇಹ, ಹೃದಯ ತಪಾಸಣೆ ಹೀಗೆ ಹಲವು ಸಮಾಜಮುಖಿ ಸೇವೆಯನ್ನು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಮಾಡುತ್ತ ಬಂದಿದೆ ಎಂದು ಡಾ.ಭಾರ್ಗವಿ ಆರ್. ಐತಾಳ್ ತಿಳಿಸಿದರು.
ಸೆಲ್ಕೋ ಪೌಂಡೇಶನ್ ಡಿಜಿಎಂ ಗುರುಪ್ರಕಾಶ್ ಶೆಟ್ಟಿ, ಏರಿಯಾ ಮ್ಯಾನೇಜರ್ ಶೇಖರ ಶೆಟ್ಟಿ, ಶಾಖಾಧಿಕಾರಿ ಮಧುಸೂದನ್, ಹರ್ಷಿತ್, ಸಂತೋಷ್, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಎಚ್.ದಿನಕರ ಪ್ರಭು, ಪೂರ್ವಾಧ್ಯಕ್ಷ ಎಚ್.ರಮೇಶ್ ಆಚಾರ್ಯ, ಬೇಳಂಜೆ ಹರೀಶ ಪೂಜಾರಿ, ಪದಾಧಿಕಾರಿಗಳಾದ ಭಾರ್ಗವಿ ರಾಮಚಂದ್ರ ಐತಾಳ್, ಮಹಾಬಲ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ, ಮೋಹನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು
Post a comment