"ಕಾರ್ಲ ಕಜೆ ಬ್ರಾಂಡ್ ಗೆ ಕೃಷಿ ಸಂಶೋಧನಾ ಕೇಂದ್ರದಿಂದ ಶೀಘ್ರದಲ್ಲಿ ಮಾನ್ಯತೆ"
"ಕಾರ್ಕಳ ಶಾಸಕ ಸುನಿಲ್ ಕುಮಾರ್ ರೈತ ಸ್ನೇಹಿ ಶಾಸಕ ಎನಿಸಿಕೊಂಡಿದ್ದಾರೆ"-ಸಚಿವ ಬಿಸಿ ಪಾಟೀಲ್
"ಬಿಳಿ ಬೆಂಡೆ ಹಾಗು ಕಾರ್ಲ ಕಜೆ ಸ್ವರ್ಣ ಕಾರ್ಕಳದ ಭಾಗವಾಗಿದೆ"-ಶಾಸಕ ಸುನೀಲ್ ಕುಮಾರ್
ಟೈಮ್ಸ್ ಆಫ್ ಕಾರ್ಕಳ ವರದಿ
ಕಾರ್ಕಳ:''ಕೃಷಿ ಮೂಲಭೂತ ಸೌಕರ್ಯಗಳಿಗಾಗಿ ಒಂದು ಲಕ್ಷ ಕೋಟಿ ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ್ದು ಇದರಲ್ಲಿ ಆಹಾರ ಸಂಸ್ಕರಣೆ ಹಾಗೂ ಬ್ರಾಂಡಿಂಗ್ ಗಾಗಿ ಹತ್ತು ಸಾವಿರಕೋಟಿ ರೂಪಾಯಿಗಳನ್ನು ಕೇಂದ್ರ ಮೀಸಲಿರಿಸಿದೆ.ರೈತರ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವ ನಿಟ್ಟಿನಲ್ಲಿ ಆಹಾರ ಸಂಸ್ಕರಣೆ ಹಾಗೂ ಮಾರುಕಟ್ಟೆ ತರಬೇತಿ ನೀಡುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು ಸುಮಾರು 500 ರೈತರಿಗೆ 6 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ಅವರು ಕಾರ್ಕಳದ ಕುಕ್ಕುಂದೂರು ಗ್ರಾಮಪಂಚಾಯತ್ ಮೈದಾನದಲ್ಲಿ ನಡೆದ ಅವರು ಕಾರ್ಲ ಕಜೆ ಕುಚ್ಚಲಕ್ಕಿ ಬ್ರಾಂಡ್ ಹಾಗೂ ಬಿಳಿಬೆಂಡೆ ಬ್ರಾಂಡನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಕಾರ್ಕಳದಲ್ಲಿ ಬಿಡುಗಡೆಯಾದ ಕಾರ್ಲ ಕಜೆ ಬ್ರಾಂಡ್ ನ ಭತ್ತವನ್ನು ಸಂಶೋಧನೆಗೆ ಒಳಪಡಿಸಿ ಅದರಲ್ಲಿ ಖನಿಜಾಂಶಗಳನ್ನು ಪತ್ತೆಹಚ್ಚಿ ,ಈ ಬ್ರಾಂಡ್ ಗೆ ಕೃಷಿ ಸಂಶೋಧನಾ ಕೇಂದ್ರದಿಂದ ಮಾನ್ಯತೆ ಒದಗಿಸುವಂತೆ ಶಿವಮೊಗ್ಗ ಕೃಷಿ ವಿವಿಯ ಉಪಕುಲಪತಿಗಳಾದ ಎಸ್ ಕೆ ನಾಯಕ್ ಅವರಿಗೆ ಸೂಚಿಸಿದರು.
ಭೂಮಿಯ ಫಲವತ್ತತೆ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ರೈತರ ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿಗೆ ರೈತರು ಹೆಚ್ಚು ಒತ್ತು ನೀಡಬೇಕು ಹಾಗೂ ಮಿತವಾದ ನೀರಿನ ಲಭ್ಯತೆಗೆ ಅನುಗುಣವಾಗಿ ಕೃಷಿ ಪದ್ದತಿಯಲ್ಲಿ ಬದಲಾವಣೆ ಮಾಡಬೇಕೆಂದರು.
ಶಾಸಕರು ಎಂದರೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಇತರೇ ಜನಪರ ಕೆಲಸಗಳನ್ನು ಮಾಡುವವರು ಎಂಬುದು ಸಾಮಾನ್ಯ ವಿಚಾರ. ಆದರೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಕಾರ್ಲ ಕಜೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ರೈತ ಸ್ನೇಹಿ ಶಾಸಕ ಎನಿಸಿಕೊಂಡಿದ್ದಾರೆ ಎಂದರು.
ಬಳಿಕ ಮಾತನಾಡಿದ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ 'ಸ್ವರ್ಣ ಕಾರ್ಕಳದ ಕನಸನ್ನು ಈಡೇರಿಸುವ ಸಲುವಾಗಿ ಕಾರ್ಕಳದಲ್ಲಿ ಮನೆಮನೆಗಳಲಿ ಬಳಕೆಯಾಗುತ್ತಿರುವ ಕಜೆ ಕುಚ್ಚಲಕ್ಕಿ ಹಾಗೂ ಬಿಳಿಬೆಂಡೆಯನ್ನು ನಮ್ಮ ತಾಲುಕಿನ ಬ್ರಾಂಡ್ ಆಗಿ ಬಿಡುಗಡೆಗೊಳಿಸಲಾಗಿದೆ. ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ರೈತರ ಪರಿಶ್ರಮದ ಫಲವಾಗಿ ಆಯಾ ಭಾಗದಲ್ಲಿ ಅವರು ಬೆಳೆದ ಉತ್ಪನ್ನಗಳು ಬ್ರಾಂಡ್ ಆಗಿ ರೂಪುಗೊಂಡಿವೆ.ಇದೇ ರೀತಿಯಲ್ಲಿ ನಮ್ಮ ರೈತರು ಕಾರ್ಲ ಕಜೆ ತಳಿಯ ಭತ್ತವನ್ನು ಬೆಳೆಸಬೇಕು ಈ ಮೂಲಕ ರೈತರೇ ಕಾರ್ಲ ಕಜೆ ಬ್ರಾಂಡ್ ರೂಪಿಸುವಂತಾಗಬೇಕೆಂದು ಕರೆ ನೀಡಿದರು. ಸುಮಾರು 1.500 ಹೆಕ್ಟೇರ್ ಪ್ರದೇಶದಲ್ಲಿ ಕಾರ್ಲ ಕಜೆ ಭತ್ತ ಬೆಳೆಸಲಾಗಿದೆ. ಒಟ್ಟು 5 ಸಾವಿರ ಕ್ವಿಂಟಾಲ್ ಅಕ್ಕಿ ಮಾರಾಟಕ್ಕೆ ಲಭ್ಯವಿದೆ ಎಂದರು. ಕಜೆ ಅಕ್ಕಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಕೃಷಿ ಸಂಶೋಧನಾ ಕೇಂದ್ರಗಳು ಹಾಗೂ ಕೃಷಿ ಇಲಾಖೆ ಮುಂದಾಗಬೇಕು.ಮುಂದಿನ ದಿನಗಳಲ್ಲಿ ಮನೆ ಮನೆಯಲ್ಲಿ ಬೆಂಡೆ ಗಿಡಗಳನ್ನು ಬೆಳೆಸಿ ಕಾರ್ಲದ ಬೆಂಡೆಯಾಗಿ ರೂಪುಗೊಳ್ಳಬೇಕು.ಬಿಳಿ ಬೆಂಡೆ ಹಾಗು ಕಾರ್ಲ ಕಜೆ ಸ್ವರ್ಣ ಕಾರ್ಕಳದ ಭಾಗವಾಗಿದೆ. ಕಾರ್ಕಳವನ್ನು ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಲ ಕಜೆ ಬ್ರಾಂಡ್ ಸಹಕಾರಿಯಾಗಲಿದೆಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಡಾ.ನವೀನ್ ಭಟ್, ಜಂಟೀ ಕೃಷಿ ನಿರ್ದೇಶಕರಾದ ಕೆಂಪೇ ಗೌಡ, ತಾ.ಪಂ ಅಧ್ಯಕ್ಷೆ ಸೌಭಾಗ್ಯ ಮಡಿವಾಳ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ,ಕೃಷಿ ಮತ್ತು ಕೈಗಾರಿಕಾ ಸ್ಥಾಯೇ ಸಮಿತಿಯ ಅಧ್ಯಕ್ಷ ಸುಮಿತ್ ಶೆಟ್ಟಿ,ಸ್ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ್ ಶೆಟ್ಟಿ,ಜಿಲ್ಲಾ ಪಂಚಾಯತ್ ಸದಸ್ಯ ಉದಯ್ ಎಸ್. ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಜಾಹೀರಾತು
Post a comment