ಮುದ್ರಾಡಿ:ಜನ ಸಾಮಾನ್ಯನಲ್ಲೂ ಕಣ್ಣೀರು ತರಿಸಿದ " ಅಪ್ಪೆ ಎನ್ನ ಅಪ್ಪೆ "ನಾಟಕ !!!!-Times of karkala

ಮುದ್ರಾಡಿಯ ಮಣ್ಣಿನಲ್ಲಿ ನಿರಂತರವಾಗಿ ರಂಗ ತಪಸ್ಸು ನಡೆಯುತ್ತಿದೆ ಎನ್ನುವುದಕ್ಕೆ ವಿಶಾಲವಾದ ಸುಸಜ್ಜಿತ ಬಯಲು ರಂಗಸ್ಥಳ ಮತ್ತು ಮಾನವೀಯ ಮೌಲ್ಯಗಳ ನಾಟಕವನ್ನು ಸಮಾಜಕ್ಕೆ ನೀಡುತ್ತಿರುವುದೇ ಸಾಕ್ಷಿ. ಅಪ್ಪೆ ಎನ್ನ ಅಪ್ಪೆ ತುಳು ನಾಟಕ ಈಗೀನ ಸಮಾಜಕ್ಕೊಂದು ದಾರಿದೀಪ, ಕೊರೋನಾ ನಂತರದ ಜೀವನ ದರ್ಶನವನ್ನು ನಾಟಕ ಕಟ್ಟಿಕೊಟ್ಟಿದೆ. ಸಾಮಾನ್ಯ ಪ್ರೇಕ್ಷಕನನ್ನೂ ಸೆಳೆಯುವ ಶಕ್ತಿ ಈ ನಾಟಕ ಹೊಂದಿದೆ ಎಂದು ಹಿರಿಯ ರಂಗ ನಿರ್ದೇಶಕ ಡಾ.ಭರತ್‌ ಕುಮಾರ್‌ ಪೊಲಿಪು ಮೆಚ್ಚುಗೆ ವ್ಯಕ್ತಪಡಿಸಿದರು. 
ಅವರು ಮುದ್ರಾಡಿ ನಾಟ್ಕದೂರು ಆರೂರು ಕೃಷ್ಣಮೂರ್ತಿ ರಾವ್‌ ಬಯಲು ರಂಗಸ್ಥಳದಲ್ಲಿ ಬುಧವಾರ ಸಂಜೆ ಮುದ್ರಾಡಿ ನಮತುಳುವೆರ್‌ ಕಲಾ ಸಂಘಟನೆ ಹೊಸ ನಾಟಕ " ಅಪ್ಪೆ ಎನ್ನ ಅಪ್ಪೆ " ತುಳು ನಾಟಕದ ಲೋಕಾರ್ಪಣೆ ಮತ್ತು ಮೊದಲ ಪ್ರದರ್ಶನವನ್ನು ಉದ್ಘಾಟಿಸಿದರು.


ಅಂದು ಹಣ ಇಲ್ಲ ಸಂಬಂಧ ಇತ್ತು. ಇಂದು ಹಣವಿದೆ ಸಂಬಂಧ ಇಲ್ಲ ಎನ್ನುವುದನ್ನು ಅಪ್ಪೆ ಎನ್ನ ಅಪ್ಪೆ ಸಾಭೀತು ಮಾಡಿದೆ, ಅತ್ಯುತ್ತಮ ರಚನೆ, ನಿರ್ದೇಶಕ, ಪರಿಕಲ್ಪನೆ ಮತ್ತು ನಟನೆಯ ಮೂಲಕ ಮಾನವೀಯ ಮತ್ತು ಜೀವನ ಮೌಲ್ಯ ಮತ್ತು ಪ್ರೀತಿಯನ್ನು ಅದ್ಬುತ ನಾಟಕ ತೋರಿಸುತ್ತದೆ. ಇದು ಯುವ ಸಮುದಾಯಕ್ಕೂ ಒಂದು ಮಾರ್ಗಸೂಚಿ, ಸಾವಿರ ಸಾವಿರ ಪ್ರದರ್ಶನಗೊಂಡು ಸಮಾಜ ಬದಲಾಗಲಿ ಎಂದು ಭರತ್‌ ಕುಮಾರ್‌ ಪೊಲಿಪು ಶುಭಹಾರೈಸಿದರು.

 ಹಿರಿಯ ರಂಗ ನಿರ್ದೇಶಕ ಉಡುಪಿಯ ನಾಗೇಶ್‌ ಕುಮಾರ್‌ ಉದ್ಯಾವರ ಮಾತನಾಡಿ ಕೊರೋನೋತ್ತರ ರಂಗ ಚಟುವಟಿಕೆ ಹೊಸ ನಾಟಕ ಜೀವನ ದರ್ಶನ ನೀಡಿದೆ, ರಂಗ ಭೂಮಿ ಮತ್ತು ರಂಗ ಸಂಬಂಧ ಕ್ಕೆ ದೊಡ್ಡ ಶಕ್ತಿ ಇರುವುದರಿಂದ ನಾವು ಮುದ್ರಾಡಿಗೆ ನಿರಂತರವಾಗಿ ಬರಲು ಸಾಧ್ಯವಾಗುತ್ತಿದೆ. ಅದ್ಬುತ ಕಲಾವಿದರಾದ ವಾಣಿ ಸುಕುಮಾರ್‌ ಮತ್ತು ಸುಗಂಧಿ ಉಮೇಶ್‌ ಕಲ್ಮಾಡಿಯವರಂದ ಅಪ್ಪೆ ಎನ್ನ ಅಪ್ಪೆ ಜನಮನದಲ್ಲಿ ನೆಲೆಯಾಗಲಿ ಎಂದು ಆಶಿಸಿದರು.

ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ವಿ.ಆನಂದ ಸಾಲಿಗ್ರಾಮ ಮಾತನಾಡಿ ಹೊಸ ಬದುಕಿನ ಕಲ್ಪನೆಯನ್ನು ನಾಟಕ ಕಟ್ಟಿಕೊಟ್ಟು ಸೋಲು ಬದುಕಿನ ಅಂತ್ಯ ಅಲ್ಲ ಎಂಬ ನಿದರ್ಶನಕ್ಕೆ ಹೊಸ ನಾಟಕವೇ ಸಾಕ್ಷಿ ಎಂದರು.

ಉದ್ಯಮಿಯಾಗಿ ಕಲಾಪ್ರೋತ್ಸಾಹಕ ಹೆಬ್ರಿ ಯೋಗೀಶ್‌ ಭಟ್‌ ಮಾತನಾಡಿ ನಮ ತುಳುವೆರ್‌ ಕಲಾ ಸಂಘಟನೆ ನಿರಂತರ ಪರಿಶ್ರಮಕ್ಕೆ ಇಂತಹ ಮನಸೆಳೆಯುವ ನಾಟಕಗಳ ಮೂಲಕ ಫಲ ದೊರೆಯುತ್ತದೆ. ಸಾಮಾನ್ಯ ಪ್ರೇಕ್ಷಕನಿಗೂ ಕಣ್ಣೀರು ತರಿಸುವ ಅಪ್ಪೆ ಎನ್ನ ಅಪ್ಪೆ ನಾಟಕ ವಾಸ್ತಾವಿಕ ಚಿಂತನೆಗೆ ಹತ್ತಿರವಾಗಿದ್ದು ಭ್ರಮಲೋಕದಿಂದ ವಾಸ್ತವ ಜೀವನದ ದರ್ಶನ ಮಾಡಿಸುತ್ತದೆ ಎಂದರು. 

ತಾಯಿ ಮತ್ತು ತಾಯಿ ನೆಲದ ಪ್ರೀತಿಯೇ - ಅಪ್ಪೆ ಎನ್ನ ಅಪ್ಪೆ : ಗುರುರಾಜ್‌ ಮಾರ್ಪಳ್ಳಿ.

ನಾಟಕದ ರಚನೆಕಾರ ನಿರ್ದೇಶಕರಾದ ಗುರುರಾಜ್‌ ಮಾರ್ಪಳ್ಳಿ ಮಾತನಾಡಿ ತಾಯಿ ತನ್ನ ಮಕ್ಕಳಿಗಾಗಿ ಮೈಮರೆತು ತನ್ನ ಕರ್ತವ್ಯವನ್ನು ದಯನೀಯ ಸ್ಥಿತಿಯಲ್ಲೂ ಮಾಡುತ್ತಾಳೆ. ತಾಯಿಯ ದೊಡ್ಡತನ, ಮಕ್ಕಳ ಸೇವೆ, ತಾಯಿ ಮತ್ತು ತಾಯಿನೆಲದ ಪ್ರೀತಿಯನ್ನು ನನ್ನ ಈ ಹೊಸ ನಾಟಕ " ಅಪ್ಪೆ ಎನ್ನ ಅಪ್ಪೆ "ಕಟ್ಟಿ ಕೊಡುತ್ತದೆ. ಅದ್ಬುತವಾದ ಪ್ರದರ್ಶನ ನೀಡುವ ಶಕ್ತಿ ಇರುವ ರಂಗ ನಟ ನಿರ್ದೇಶಕ ಸುಕುಮಾರ್‌ ಮೋಹನ್‌ ನೇತ್ರತ್ವದ ಮುದ್ರಾಡಿ ನಮತುಳುವೆರ್‌ ಕಲಾ ಸಂಘಟನೆಗೆ ಇರುವುದರಿಂದ ಅಪ್ಪೆ ಮಗಳ ಪ್ರೀತಿ ಇನ್ನಷ್ಟು ಎತ್ತರಕ್ಕೆ ಏರುತ್ತದೆ ಎಂದರು.

ಮುದ್ರಾಡಿ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದ ಧರ್ಮದರ್ಶಿ ಧರ್ಮಯೋಗಿ ಮೋಹನ್‌, ಮುದ್ರಾಡಿ ನಮತುಳುವೆರ್‌ ಕಲಾ ಸಂಘಟನೆಯ ಅಧ್ಯಕ್ಷ ಸುಕುಮಾರ್‌ ಮೋಹನ್‌, ಕಮಲಾ ಮೋಹನ್‌, ಸುಗಂಧಿ ಉಮೇಶ್‌ ಕಲ್ಮಾಡಿ, ವಾಣಿ ಸುಕುಮಾರ್‌ , ಉಮೇಶ್ ಕಲ್ಮಾಡಿ ಉಪಸ್ಥಿತರಿದ್ದರು. ನಾಟಕಕ್ಕೆ ಗೀತಂ ಗಿರೀಶ್‌ ಸಂಗೀತ ಧ್ವನಿ ನೀಡಿದ್ದಾರೆ. ಬೆಳಕು ಪ್ರಥ್ವಿನ್ ಮತ್ತು  ಸೌಂಡ್ಸ್‌ ಶರಣ್‌ ನೀಡಿದ್ದಾರೆ. ಅತ್ಯಂತ ಕಡು ಬಡತನದಲ್ಲಿ ಹುಟ್ಟಿ ಕೂಲಿ ಮಾಡುತ್ತ ಜೀವನ ಸಾಗಿಸುವ ತಾಯಿಯ ನೆರಳಲ್ಲಿ ಬೆಳೆದು ಉನ್ನತ ವ್ಯಾಸಂಗ ಮಾಡಿ ನಗರದಲ್ಲಿ ಕೈತುಂಬಾ ಸಂಬಳದ ಉದ್ಯೋಗ ಪಡೆದು ನಗರದ ಶೋಕಿ ಯುವಕರ ಪ್ರೇಮದ ಬಲೆಗೆ ಬಿದ್ದು ರಾದ್ಧಾಂತದ ಬಳಿಕ ಮದುವೆಯೂ ಆಗಿ ಕೈ ಹಿಡಿದ ಗಂಡನ ಮಕ್ಕಳು ಬೇಡ, ಇಬ್ಬರೇ ಒಟ್ಟಿಗೆ ಇರಬೇಕು, ತಾಯಿಯನ್ನು ಅನಾಥಶ್ರಮಕ್ಕೆ ಸೇರಿಸು, ಕೆಲಸ ಬಿಡು ಸಹಿತ ಹಲವು ಕಟ್ಟಪ್ಪಣೆಗೆ ಬಲಿಯಾಗಿ ವಿಧಿ ಇಲ್ಲದೆ ವಿವಾಹ ವಿಛ್ಚೇಧನ ಆಗಿ ಕೊನೆಗೆ ತಾಯಿಗೋಸ್ಕರ, ತಾಯಿಯೇ ಸರ್ವಸ್ವ, ಇನ್ನು ತಾಯಿ ಯೇ ನನಗೆ ಎಲ್ಲ ಎಂದು ತಾಯಿ ನೆಲ ಹಳ್ಳಿಗೆ ಬಂದು ಅಂದಿನ ಹಳ್ಳಿ ಜೀವನಕ್ಕೆ ಅನಿವಾರ್ಯವಾಗಿ ಬರುವ ಒಟ್ಟಾರೆ ಕಥೆ ಒಬ್ಬ ಸಾಮಾನ್ಯ ಪ್ರೇಕ್ಷಕನಿಗೂ ಕಣ್ಣೀರು ತರಿಸುತ್ತದೆ.  

ಹೆಬ್ರಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ. ಭಾರ್ಗವಿ ಆರ್ ಐತಾಳ್, ಹೆಬ್ರಿ ಜೇಸಿಐ ಅಧ್ಯಕ್ಷೆ ಸುನೀತಾ ಅರುಣ್ ಕುಮಾರ್ ಹೆಗ್ಡೆ,ಹೆಬ್ರಿ  ತುಳಸಿ ಗ್ರೂಪ್ ನ  ಸುಜಾತ ಹರೀಶ್ , ಉಡುಪಿಯ ಡಾ.ಕಾತ್ಯಯಿನಿ ಕುಂಜಿಬೆಟ್ಟು, ರಂಗ ನಿರ್ದೇಶಕ ಚಂದ್ರನಾಥ್ ಬಜಗೋಳಿ, ಉಡುಪಿಯ ಉರಗ ತಜ್ಞ ಗುರುರಾಜ್ ಸನೀಲ್ ಸಹಿತ ಹಲವರು ತಾಯಿ ಮಗಳ ಪ್ರೀತಿಗೆ ಸಾಕ್ಷಿಯಾದರು.


ಜಾಹೀರಾತು Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget