ಕಾರ್ಕಳ:"ಗುರುವಂದನೆ ಜಾಗೃತ ಸಮಾಜದ ಪ್ರತೀಕ'' - ಡಾಕ್ಟರ್ ಮಂಜುನಾಥ್ ಕೋಟ್ಯಾನ್.
ಕಾರ್ಕಳದಲ್ಲಿ ಗುರುವಂದನೆ ಕಾರ್ಯಕ್ರಮ.
"ಒಬ್ಬ ಪ್ರಭಾವೀ ಶಿಕ್ಷಕ ತನ್ನ ಜ್ಞಾನದ ಬೆಳಕನ್ನು ನೀಡಿ ಶ್ರೇಷ್ಟ ಸಮಾಜವನ್ನು ನಿರ್ಮಾಣ ಮಾಡುತ್ತಾನೆ. ಪ್ರತೀ ಅಧ್ಯಾಪಕ ಒಂದು ಬೆಳಕಿನ ಕಿರಣ ಆಗಿ ವಿದ್ಯಾರ್ಥಿಗಳ ಮನಸನ್ನು ಸ್ಪರ್ಶಿಸಿ ಆನಂದದ ಭಾವನೆ ಮೂಡಿಸುತ್ತಾನೆ. ಅಂತಹ ಗುರುವನ್ನು ಸನ್ಮಾನಿಸುವ ಮೂಲಕ ಪ್ರಜ್ಞಾವಂತ ಸಮಾಜದ ರಚನೆ ಆಗುತ್ತದೆ. ಅಂತಹ ಗುರುವಂದನೆಯ ಕಾರ್ಯಕ್ರಮವು ಜಾಗೃತ ಸಮಾಜದ ಸಂಕೇತವೇ ಆಗಿರುತ್ತದೆ ಎಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾಕ್ಟರ್ ಮಂಜುನಾಥ್ ಕೋಟ್ಯಾನ್ ಅವರು ಹೇಳಿದರು.
ಅವರು ಕಾರ್ಕಳದ ಪ್ರಕಾಶ್ ಹೋಟೆಲಿನ ಸಂಭ್ರಮ ಸಭಾಂಗಣದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಉಡುಪಿ ವೈಕುಂಠ ಬಾಳಿಗ ಕಾನೂನು ವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾಕ್ಟರ್ ಪ್ರಕಾಶ್ ಕಣಿವೆ ಮತ್ತು ನಿವೃತ್ತ ಸಹ ಪ್ರಾಧ್ಯಾಪಕರಾದ
ಪ್ರೊ. ರೋಹಿತ್ ಅಮೀನ್ ಅವರನ್ನು ಅವರ ಕಾರ್ಕಳದ ಪೂರ್ವ ಮತ್ತು ಪ್ರಸಕ್ತ ವಿದ್ಯಾರ್ಥಿಗಳು ಸೇರಿ ಸನ್ಮಾನಿಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅವರೀರ್ವರನ್ನು ಶಾಲು, ಮಾನಪತ್ರ, ಅಭಿನಂದನಾ ಸ್ಮರಣಿಕೆ, ಹಾರ, ಫಲ ಪುಷ್ಪಗಳ ತಳಿಗೆ ಸಹಿತ ಅಭಿನಂದಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾಕ್ಟರ್ ಪ್ರಕಾಶ್ ಕಣಿವೆ "ವಿದ್ಯಾರ್ಥಿಗಳೇ ಸಂಸ್ಥೆಯ ನಿಜವಾದ ಆಸ್ತಿ. ನಾನು ನನ್ನ 31 ವರ್ಷಗಳ ಬೋಧನೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಬೆಳೆದಿದ್ದೇನೆ. ವಿದ್ಯಾರ್ಥಿಗಳು ಸೇರಿ ಮಾಡಿದ ಈ ಸನ್ಮಾನ ಸ್ವೀಕರಿಸಿ ಮನಸ್ಸು ತುಂಬಿ ಬಂದಿದೆ" ಎಂದರು.
ಇನ್ನೋರ್ವ ಸನ್ಮಾನಿತರಾದ ಪ್ರೊ. ರೋಹಿತ್ ಅಮೀನ್ ಅವರು ಮಾತನಾಡಿ "ನಾನು ಅಧ್ಯಾಪಕ ಆಗುವ ಆಸಕ್ತಿಯಿಂದ ಈ ಹುದ್ದೆಗೆ ಬಂದವನಲ್ಲ. ಆದರೆ ವೃತ್ತಿಗೆ ಬಂದ ನಂತರ ವೃತ್ತಿಯನ್ನು ಪ್ರೀತಿ ಮಾಡಲು ಆರಂಭ ಮಾಡಿದೆ. ಇಂದು ಯಾವುದೇ ವಿಷಾದ ಇಲ್ಲದೆ ನಿವೃತ್ತಿ ಹೊಂದಿದ್ದೇನೆ. ನನ್ನ ಜ್ಞಾನವನ್ನು ಹಂಚಲು ಅವಕಾಶ ಕೊಟ್ಟ ವೈಕುಂಠ ಬಾಳಿಗ ಕಾನೂನು ವಿದ್ಯಾಲಯಕ್ಕೆ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು.
ಕಾರ್ಕಳದ ವಕೀಲರ ಸಂಘದ ಅಧ್ಯಕ್ಷರಾದ ಸನತ್ ಕುಮಾರ್ ಜೈನ್, ಕಾರ್ಕಳ ಭೂನ್ಯಾಯ ಮಂಡಳಿ ಸದಸ್ಯ ಮತ್ತು ವಕೀಲರಾದ ರವೀಂದ್ರ ಮೊಯ್ಲಿ, ವೈಕುಂಠ ಬಾಳಿಗ ಕಾನೂನು ವಿದ್ಯಾಲಯದ ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ್ ಪಿ. ಎಸ್. ಅವರು ಅಭಿನಂದನಾ ಭಾಷಣ ಮಾಡಿದರು. 2019ರ ಸಾಲಿನ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ವಿಶೇಷವಾದ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಅಡ್ವೋಕೇಟ್ ಸಂಪತ್ ಕುಮಾರ್ ಜೈನ್ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್ ಅವರು ಅತಿಥಿಗಳನ್ನು ಗೌರವಿಸಿದರು. ಅಡ್ವೋಕೇಟ್ ಸದಾನಂದ ಅವರು ಧನ್ಯವಾದ ನೀಡಿದರು. ರಾಜೇಂದ್ರ ಭಟ್ ಕೆ ಅವರು ಕಾರ್ಯಕ್ರಮ ನಿರೂಪಿಸಿದರು.
Post a comment