ಸರಕಾರಿ ಸ್ವಾಮ್ಯದ ಆಸ್ತಿಗಳನ್ನು ಮಾರಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಬಡವರ ಬದುಕನ್ನು ಬರ್ಬರಗೊಳಿಸಿದ್ದೇ ಬಿಜೆಪಿ ಸಾಧನೆ:ಮಾಜಿ ಸಚಿವ ಅಭಯಚಂದ್ರ ಜೈನ್ ವಾಗ್ದಾಳಿ-Times of karkala

ಮೂಡುಬಿದಿರೆ ಫೆ.20:ಬ್ಲಾಕ್ ಕಾಂಗ್ರೆಸ್ ಮೂಡುಬಿದಿರೆ ಆಶ್ರಯದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ಬೆಲೆ ಏರಿಕೆ ವಿರುದ್ಧ  ಕೇಂದ್ರ ಬಿಜೆಪಿ ಸರಕಾರ ಮತ್ತು ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಮೂಡುಬಿದಿರೆ ಪೇಟೆಯಲ್ಲಿ ಜಾಥಾ  ಮತ್ತು ಪ್ರತಿಭಟನಾ ಸಭೆ ನಡೆಯಿತು.


ಮೂಡುಬಿದಿರೆಯ ಕಾಂಗ್ರೆಸ್ ಪಕ್ಷದ  ಕಚೇರಿಯಿಂದ ಜಾಥಾ ಆರಂಭವಾಗಿ ಎತ್ತಿನಗಾಡಿಯನ್ನು ಮಾಜಿ ಶಾಸಕ ಅಭಯಚಂದ್ರ ಜೈನ್ ಮತ್ತು ಬ್ಲಾಕ್ ಕಾಂಗ್ರೆಸ್ ನಾಯಕರುಗಳು ತಹಶೀಲ್ದಾರ್ ಕಚೇರಿಯವರೆಗೆ ಎಳೆದುಕೊಂಡು ಹೋಗಿದ್ದು ಮುಖ್ಯ ಆಕರ್ಷಣೆಯಾಗಿತ್ತು.      

ಎತ್ತಿನ ಗಾಡಿಯ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ಸೈಕಲನ್ನು ಹತ್ತಿ ಪ್ರತಿಭಟನೆ ಹೊರಟಿದ್ದ ಪ್ರತಿಭಟನಾಕಾರರು ರಸ್ತೆಯುದ್ದಕ್ಕೂ ಬಿಜೆಪಿ ನೇತೃತ್ವದ ಸರಕಾರಕ್ಕೆ ಧಿಕ್ಕಾರ ವನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದರು.

     

ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ, ಇಂದು ಕೇಂದ್ರ ಸರಕಾರದ ಅವೈಜ್ಞಾನಿಕ ನೀತಿಯಿಂದಾಗಿ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಇದನ್ನು ಪ್ರಶ್ನಿಸುವವರ ಮೇಲೆ ದೇಶದ್ರೋಹಿ ಎನ್ನುವ ಮಟ್ಟಕ್ಕೆ ಸರಕಾರ ಮತ್ತು ಅದರ ಸಮರ್ಥಕರು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

   

ಈ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಮತ್ತು ಭಾರತದ ದೇಶಪ್ರೇಮಿ ನಾಗರಿಕರನ್ನು ಬಿಜೆಪಿ ಸರಕಾರದ ವೈಫಲ್ಯವನ್ನು ಪ್ರಶ್ನೆ ಮಾಡಿದರು ಎನ್ನುವ ಒಂದೇ ಕಾರಣಕ್ಕೆ ದೇಶ ವಿರೋಧಿಯಂತೆ ಬಿಂಬಿಸಲು ಬಿಜೆಪಿ ಸರ್ಕಸ್ ಮಾಡುತ್ತಿದ್ದು ಇದು ಎಂದಿಗೂ ಫಲಿಸುವುದಿಲ್ಲ, ಬ್ರಿಟಿಷರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದವರು ಇಂದು ನಮಗೆ ದೇಶಭಕ್ತಿಯ ಪಾಠವನ್ನು ಮಾಡುತ್ತಿದ್ದಾರೆ. ಅಂದು ಬ್ರಿಟಿಷರ ಸಮರ್ಥನೆಗಿಳಿದವರು ಇಂದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ದೇಶದ ಜನರಿಗಾಗಿ ಹೋರಾಟವನ್ನು ನಡೆಸುತ್ತಿವರನ್ನು ದೇಶದ್ರೋಹಿಗಳು ಎನ್ನುವುದು ದೊಡ್ಡ ಅಪಹಾಸ್ಯ ಎಂದರು.


ಕಾಂಗ್ರೆಸ್ ಈ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದೆ..  ಬಿಜೆಪಿ ದೇಶಕ್ಕಾಗಿ ಏನು ಮಾಡಿದೆ.. ?? ಕಾಂಗ್ರೆಸ್ ನ ಅವಧಿಯಲ್ಲಿ ನಿರ್ಮಾಣವಾದ ಸರಕಾರದ ಸ್ವತ್ತುಗಳನ್ನು ಮಾರಿ ಜೀವನ ನಡೆಸುತ್ತಿರುವುದು ಬಿಜೆಪಿಯ ಸಾಧನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗೀಕರಣದ ಹೆಸರಲ್ಲಿ ಸರಕಾರದ ಒಂದೊಂದೇ ಆಸ್ತಿಯನ್ನು ಹರಾಜಿಗಿಟ್ಟು ಅಂಬಾನಿ ಅದಾನಿ ಏಜೆಂಟರಂತೆ ಪ್ರಧಾನಿ ವರ್ತಿಸುತ್ತಿರುವುದು ಈ ದೇಶದ ಮಹಾದುರಂತ. ಬಡವರಿಗಾಗಿ ಈ ದೇಶದಲ್ಲಿ ಕಾಂಗ್ರೆಸ್ ರೂಪಿಸಿದ ಕಾನೂನುಗಳನ್ನು ಬಿಜೆಪಿ ಸರಕಾರ ರದ್ದುಗೊಳಿಸುತ್ತಿದ್ದು ಬಡವರಿಗೆ ಮುಂದಿನ ದಿನಗಳಲ್ಲಿ ಇದು ಮಾರಕವಾಗಿ ಪರಿಣಮಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ದಿನನಿತ್ಯದ ಆದಾಯಕ್ಕಿಂತಲೂ ಹೆಚ್ಚಿನ ಹಣವನ್ನು ಇಂದು ಪೆಟ್ರೋಲ್ ಡೀಸೆಲ್ ಗ್ಯಾಸ್ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು ಖರೀದಿಸಲು ಬಡವರು ಸರ್ಕಸ್ ನಡೆಸುತ್ತಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಸರಕಾರ ಇದನ್ನು ಗಮನಿಸದೆ ಕಣ್ಮುಚ್ಚಿ ಕುಳಿತದ್ದು ದುರದೃಷ್ಟಕರ. ಪರಿಸ್ಥಿತಿ ಹೀಗೆ ಮುಂದುವರಿದರೆ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಅಂತಹ ಪರಿಸ್ಥಿತಿ ನಿರ್ಮಾಣವಾಗುವ ಮುನ್ನ ಪ್ರತಿಯೊಬ್ಬ ಪ್ರಜೆಯೂ ಜಾಗೃತನಾಗಿ ಸರಕಾರದ ಅವೈಜ್ಞಾನಿಕ ನೀತಿಯನ್ನು ಪ್ರಶ್ನಿಸಿ ಸರಕಾರವನ್ನು ಸರಿಯಾದ ದಾರಿಗೆ ತರುವ ಕೆಲಸವನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.


ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ಸುಪ್ರಿಯ ಡಿ ಶೆಟ್ಟಿ, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಯುವ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಹಾಸ ಸನಿಲ್, ಪುರಸಭಾ ಸದಸ್ಯರಾದ ಪಿ.ಕೆ ಥೋಮಸ್, ಜೊಸ್ಸಿ ಮೆನೇಜಸ್, ಪುರಂದರ ದೇವಾಡಿಗ, ಕೊರಗಪ್ಪ, ಕರಿಂ ಇಕ್ಬಾಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರತ್ನಾಕರ ಸಿ. ಮೊಯ್ಲಿ, ರಾಘು ಪೂಜಾರಿ ಬೆಳುವಾಯಿ, ಪ್ರೇಮನಾಥ್ ಮಾರ್ಲ, ಅರುಣ್ ಕುಮಾರ್ ಶೆಟ್ಟಿ, ಶಿವಾನಂದ ಪಾಂಡ್ರು, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರವೀಣ್ ಜೈನ್ ಶಿರ್ತಾಡಿ, ಹರೀಶ್ ಆಚಾರ್ಯ ನೆಲ್ಲಿಕಾರು, ಜೋಕಿಂ ಕೊರೆಯ, ವಕ್ತಾರ ರಾಜೇಶ್ ಕಡಲಕೆರೆ, ಸತೀಶ್ ಭಂಡಾರಿ ಉಪಸ್ಥಿತರಿದ್ದರು.

 ಜಾಹೀರಾತು 

 

 

 

 

 

 

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget