ವರಂಗ:ವರಂಗ ಜೈನ ಮಠದಿಂದ ಊರಿನವರಿಗೆ ಅನ್ಯಾಯವಾಗುತ್ತಿದೆ ಎಂದು ನಮ್ಮ ಬಗ್ಗೆ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ, ಇದನ್ನು ಸಹಿಸಲು ಸಾಧ್ಯವಿಲ್ಲ, ಮಠದಿಂದ ಈ ತನಕ ಯಾರಿಗೂ ಅನ್ಯಾಯವಾಗಿಲ್ಲ. ಅಪಪ್ರಚಾರ ಸಲ್ಲದು, ಊರಿನ ಸಮಗ್ರ ಅಭಿವೃದ್ಧಿಗಾಗಿ ಈ ಕ್ಷಣದ ತನಕ ಎಲ್ಲರೂ ಸೇವೆ ಮಾಡಿದ್ದೇವೆ. ನಾವು ಊರಿಗಾಗಿ ಏನೆಲ್ಲ ಮಾಡಿದ್ದೇವೆ ಎಂದು ನಿಮ್ಮ ತಂದೆ ತಾಯಿ ಕುಟುಂಬದ ಹಿರಿಯರಿಂದ ಕೇಳಿ ತಿಳಿಯಿರಿ, ಜನತೆಯನ್ನು ಗೊಂದಲಕ್ಕೆ ಸಿಲುಕಿಸಬೇಡಿ, ಸತ್ಯದ ನಡೆಯಲ್ಲಿ ನಡೆಯಿರಿ, ಅಧಿಕಾರ ದರ್ಪ ಬದುಕನ್ನು ಬೆಳಗಿಸುವುದಿಲ್ಲ, ಮಠದೊಂದಿಗೆ ಭಾಂದವ್ಯ ಹೆಚ್ಚಿಸಿಕೊಂಡ ಊರಿನ ಅಭಿವೃದ್ದಿಗೆ ನೀವೂ ಕೂಡ ಕೈಜೋಡಿಸಿ ಎಂದು ವಾರಂಗ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ಬಹಿರಂಗವಾಗಿ ನೋವು ವ್ಯಕ್ತಪಡಿಸಿದರು.
ಅವರು ವರಂಗ ಪದ್ಮಶ್ರೀ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಸೋಮವಾರ ವರಂಗ ಜೈನ ಮಠದ ಗದ್ದೆಯ ಬಯಲು ರಂಗ ಮಂದಿರದಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.
ವರಂಗ ಜೈನ ಮಠಕ್ಕೆ ೫೦೦೦ ಎಕರೆ ಜಮೀನು ಇತ್ತು ಅದರಲ್ಲಿ ೩೫೦೦ಕ್ಕೂ ಹೆಚ್ಚು ಎಕರೆ ಜಮೀನನ್ನು ನಾವು ವರಂಗದ ಗ್ರಾಮಸ್ಥರಿಗೆ ಒಕ್ಕಲು ಮಸೂಧೆಯಡಿ ಬಿಟ್ಟು ಕೊಟ್ಟಿದ್ದೇವೆ. ಮುಂದೆಯೂ ಊರಿನ ಜನತೆಗಾಗಿ ಶಾಲೆ, ಆಸ್ಪತ್ರೆಯನ್ನು ಮಾಡುತ್ತೇವೆ, ಪರಸ್ಪರ ಪ್ರೀತಿ ವಿಶ್ವಾಸದ ಜೀವನವನ್ನು ಎಲ್ಲರೊಂದಿಗೂ ಬೆರೆತು ಸಾಗಿಸಿ ಎಂದ ಸ್ವಾಮೀಜಿ ಅಪರೂಪದ ಮಹಾನ್ ಚೇತನರಾಗಿರುವ ವೀರಪ್ಪ ಮೊಯಿಲಿ ಜೈನ ಸಮುದಾಯ ಮತ್ತು ನಾಡಿಗೆ ಬಹುದೊಡ್ಡದಾದ ಶಾಶ್ವತ ಕೊಡುಗೆಯನ್ನು ನೀಡಿದ್ದಾರೆ. ದೇಶದಲ್ಲೇ ಮೊದಲು ಜೈನರಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ವೀರಪ್ಪ ಮೊಯಿಲಿಯವರು ಕರ್ನಾಟಕದಲ್ಲಿ ನೀಡಿದ್ದಾರೆ. ಜೈನರ ಪ್ರಾಕೃತ ಭಾಷೆಯ ಉಳಿವಿಗಾಗಿ ಅಧ್ಯಯನ ಪೀಠವನ್ನು ಸ್ಥಾಪಿಸಿದ್ದಾರೆ. ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸೇವೆ ಮಾಡಲು ಹೇಗೆ ಸಾಧ್ಯ ಎಂಬುದಕ್ಕೆ ವೀರಪ್ಪ ಮೊಯಿಲಿಯವರೇ ಸಾಕ್ಷಿ ಎಂದು ಸ್ವಾಮೀಜಿ ಅಭಿನಂದಿಸಿದರು.
ವಾರಂಗದ ಗತವೈಭವ ಮತ್ತೇ ಮರುಕಳಿಸುತ್ತಿದೆ : ವೀರಪ್ಪ ಮೊಯಿಲಿ.
ಪದ್ಮಶ್ರೀ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವಾರ್ಷಿಕೋತ್ಸವವನ್ನು ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಸಾವಿರಾರು ವರ್ಷ ಪುರಾತನವಾದ ವಾರಂಗ ಕ್ಷೇತ್ರದ ಗತ ವೈಭವ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ಮುಂದಾಳತ್ವದಲ್ಲಿ ಗತವೈಭವ ಮತ್ತೇ ಮರುಕಳಿಸುತ್ತಿದೆ. ವೈಭವದಲ್ಲಿ ಜಾತ್ರೆಯ ಜೊತೆಗೆ ಮಠದ ಪರಿಸರ ಮತ್ತು ಊರಿನ ಅಭಿವೃದ್ಧಿಯೂ ಕೂಡ ನಡೆಯುತ್ತಿರುವುದು ಮಠ ಮತ್ತು ಸ್ವಾಮೀಜಿಗೆ ಊರಿನ ಬಗೆಗಿರುವ ಕಾಳಜಿಯನ್ನು ತೋರಿಸುತ್ತದೆ. ವಾರಂಗದಲ್ಲಿ ಕಲೆ,ಧರ್ಮ ಮತ್ತು ಜ್ಞಾನದ ಸಂಪತ್ತೇ ಅಡಗಿದೆ, ಅದನ್ನು ನಾವು ನೀವೆಲ್ಲ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಕಳದ ಜನ ನನಗೆ ನಿರಂತರ ಆಶೀರ್ವಾದ ಮಾಡಿದ ಕಾರಣದಿಂದ ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ. ಬಾಲ್ಯದಿಂದಲೂ ಜೈನರ ಒಡನಾಟ, ಜೈನ ಸಂಸ್ಕೃತಿಯ ನಡುವೆ ಬೆಳೆದಿದ್ದು, ಜೈನರೇ ನನ್ನ ಶಾಲಾ ಗುರುವಾಗಿದ್ದು ನಾನು ಎತ್ತರಕ್ಕೆ ಬೆಳೆಯಲು, ಬಾಹುಬಲಿಯ ಬಗೆಗೆ ಮಹಾಕಾವ್ಯ ಬರೆಯಲು, ಜೈನ ಸಮುದಾಯಕ್ಕೆ ಏನಾದರೂ ಸೇವೆ ಮಾಡಲು ಸಾಧ್ಯವಾಗಿದೆ. ದೀರ್ಘವಾಗಿ ಅಧ್ಯಯನ ಮಾಡಿ ೧೦ ವರ್ಷದಲ್ಲಿ ಬರೆಯಬೇಕಾದ ಮಹಾಕಾವ್ಯವನ್ನು ಕೇವಲ ಎರಡೂವರೇ ವರ್ಷದಲ್ಲಿಯೇ ಬರೆಯಲು ಸಾಧ್ಯವಾಗಿದ್ದು ಜೈನ ಧರ್ಮಗುರುಗಳ ಆಶೀರ್ವಾದ ಕಾರಣ. ಬಾಲ್ಯದಿಂದಲೂ ಸತ್ಯ ಧರ್ಮ ನ್ಯಾಯ ಪರವಾಗಿ ಸೇವೆ ಮಾಡಿದ್ದೇನೆ. ನಮ್ಮೂರಿನ ಮಣ್ಣಿನ ಪುಣ್ಯವು ನನನ್ನು ವಿಶ್ವದೆತ್ತರಕ್ಕೇರಿಸಿದೆ. ಡಾ.ಅಂಬೇಡ್ಕರ್ ಕುಳಿತ ಕುರ್ಚಿಯಲ್ಲೂ ಕುಳಿತುಕೊಳ್ಳುವ ಭಾಗ್ಯ ದೊರೆತಿದ್ದೆ. ಬಡವರ ಮಕ್ಕಳು ವಿದ್ಯಾವಂತರಾಗಿ ಸಬಲರಾಗಬೇಕು ಎಂದು ಕನಸು ಕಂಡು ಅವಕಾಶ ದೊರೆತಾಗ ಮಾನವ ಧರ್ಮದ ಉದ್ಧಾರಕ್ಕೆ ಸೇವೆ ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ ಎಂದು ವೀರಪ್ಪ ಮೊಯಿಲಿ ಮಾರ್ಮಿಕವಾಗಿ ನುಡಿದರು. ಈಗ ಸತ್ಯದ ರಾಜಕೀಯ ಉಳಿದಿಲ್ಲ ಸತ್ಯ ಧರ್ಮ ನ್ಯಾಯಕ್ಕೆ ಬೆಲೆ ಇಲ್ಲ, ಸುಳ್ಳು ಮತ್ತು ಅಧರ್ಮವೇ ರಾರಾಜಿಸುತ್ತಿದೆ. ತ್ಯಾಗ ಮತ್ತು ಸೇವೆಯ ಭಾವನೆ ಎಲ್ಲರಲ್ಲೂ ದೂರವಾಗಿದೆ ಎಂದು ಮೊಯಿಲಿ ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ವಾರಂಗ ಕ್ಷೇತ್ರಕ್ಕೆ ದೊರೆತ ಒಂದು ವರ. ಸ್ವಾಮೀಜಿಯ ಮೂಲಕ ಊರಿನ ಸಮಗ್ರ ಅಭಿವೃದ್ಧಿ ಆಗಲಿದೆ. ಏನೋ ಆಗಿದ್ದ ನನ್ನ ಬದುಕು ಬದಲಿಸಿ ಎತ್ತರಕ್ಕೆ ಏರಿಸಿದ್ದು ನನ್ನ ರಾಜಕೀಯ ಗುರು ವೀರಪ್ಪ ಮೊಯಿಲಿಯವರನ್ನು ಸ್ಮರಿಸಿದರು.
ಡಾ.ವೀರಪ್ಪ ಮೊಯಿಲಿ, ಮಠದ ಪ್ರಧಾನ ಅರ್ಚಕ ಮೃತ್ಯುಂಜಯ ಇಂದ್ರ, ಅರ್ಚಕ ಧರಣೇಂದ್ರ ಇಂದ್ರ, ವ್ಯವಸ್ಥಾಪಕ ಯುವರಾಜ ಅರಿಗ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ರಥೋತ್ಸವ ನಡೆಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ವರಂಗ ಪಂಚಾಯಿತಿ ಅಧ್ಯಕ್ಷೆ ಉಷಾ ಹೆಬ್ಬಾರ್, ಯುವ ಸೇವಾ ಕ್ರೀಡಾಧಿಕಾರಿ ರಿತೇಶ್ ಶೆಟ್ಟಿ, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಭಾಸ್ಕರ್ ಕೆ, ಯೋಜನ ಆಯೋಗದ ಸದಸ್ಯ ಮೊಂತೇರೋ, ಹೆಬ್ರಿ ಸಬ್ ಇನ್ಸ್ ಫೆಕ್ಟರ್ ಸುಮಾ ಬಿ, ನೀರೆ ಗರಡಿ ಮುಖ್ಯಸ್ಥ ನೀರೆ ಕೃಷ್ಣ ಶೆಟ್ಟಿ, ವರಂಗ ಸಿಎ ಬ್ಯಾಂಕ್ ಅಧ್ಯಕ್ಷ ಕೆ.ಚಂದ್ರಶೇಖರ ಬಾಯರಿ, ವರಂಗ ಪಂಚಾಯಿತಿ ಸದಸ್ಯ ಪ್ರಕಾಶ ದೇವಾಡಿಗ, ವರಂಗ ಪದ್ಮಶ್ರೀ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಲಕ್ಷ್ಮಣ ಆಚಾರ್, ಗೌರವ ಸಲಹೆಗಾರ ವಿಠ್ಠಲ ಪೂಜಾರಿ, ಅಧ್ಯಕ್ಷ ಸುರೇಂದ್ರ ಪೂಜಾರಿ, ಪೂರ್ವಾಧ್ಯಕ್ಷ ಸೂರ್ಯ ದೇವಾಡಿಗ, ಪ್ರಮುಖರಾದ ಶಂಕರ ಶೆಟ್ಟಿ, ಉದಯ ಆಚಾರ್ಯ , ಸುರೇಶ ಪೂಜಾರಿ,ಉದಯ ದೇವಾಡಿಗ, ಕುಮಾರ ಸಾಲಿಯಾನ್, ರಾಮಯ್ಯ ಆಚಾರ್, ಮಹಾಬಲ ಪೂಜಾರಿ, ಪ್ರಮೋದ್ ಪೂಜಾರಿ, ಸುನೀಲ್ ಪೂಜಾರಿ, ಶಶಿಧರ ದೇವಾಡಿಗ, ಶ್ರೀಕಾಂತ್ ದೇವಾಡಿಗ, ಸುಲಕ್ಷಣ್ ವಿ.ಎಲ್, ಸುಲಕ್ಷಿತ್ ವಿಎಲ್, ಸುನೀಲ್ ಶೆಟ್ಟಿ, ಸತೀಶ ಆಚಾರ್ಯ, ಸಂಧ್ಯಾ, ಮಂಜುಶ್ರೀ, ಸುಂದರ ಪೂಜಾರಿ ಸಹಿತ ಸಂಘದ ಪದಾಧಿಕಾರಿಗಳು, ಗಣ್ಯರು,ಪ್ರಮುಖರು ಉಪಸ್ಥಿತರಿದ್ದರು. ವಕೀಲ ಸುರೇಶ ಪೂಜಾರಿ ಸ್ವಾಗತಿಸಿ ಅಜಿತ್ ಕುಮಾರ್, ಮಾತಿಬೆಟ್ಟು ಪ್ರಕಾಶ ಪೂಜಾರಿ, ಬಲ್ಲಾಡಿ ಚಂದ್ರಶೇಖರ ಭಟ್, ನಿತ್ಯಾನಂದ ಭಟ್ ನಿರೂಪಿಸಿದರು.
ಜಾಹೀರಾತು
Post a comment