ಕಾರ್ಕಳ:ಪುರಸಭಾ ರಸ್ತೆಗಳ ದುಸ್ಥಿತಿ ಖಂಡಿಸಿ ವಿಪಕ್ಷ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆ: ದುರಸ್ತಿ ಭರವಸೆಯ ಬಳಿಕ ಧರಣಿ ವಾಪಾಸ್-Times of karkala

ಕಾರ್ಕಳ: ಕಾರ್ಕಳ ನಗರದ ರಸ್ತೆಗಳು ಹೊಂಡಗುಂಡಿಗಳಿಂದ ಸಂಪೂರ್ಣವಾಗಿ ಹದಗೆಟ್ಟು ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ಹಿನ್ನೆಲೆಯಲ್ಲಿ ವಿಪಕ್ಷ ಕಾಂಗ್ರೆಸ್ ಪುರಸಭಾ ಸದಸ್ಯರು ಪುರಸಭೆ ಆಡಳಿತದ  ವಿರುದ್ಧ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.


ಕಾರ್ಕಳ ಪುರಸಭಾಧ್ಯಕ್ಷೆ ಸುಮಾ‌ಕೇಶವ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ‌ ಕಾಂಗ್ರೆಸ್ ಸದಸ್ಯರು ಪುರಸಭಾ ವ್ಯಾಪ್ತಿಯ ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಲು ಬಿಗಿಪಟ್ಟು ಹಿಡಿದರು. ಈ ಕುರಿತು ಅಧ್ಯಕ್ಷೆ ಸುಮಾ ಕೇಶವ್ ಸ್ಪಷ್ಟನೆ ನೀಡಿ ಈ‌ ಸಲ ಸುರಿದ ಭಾರೀ ಮಳೆಗೆ‌ ರಸ್ತೆಗಳು ಗುಂಡಿಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ ಆದ್ದರಿಂದ ಸ್ವಲ್ಪ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಹೊಂಡಗುಂಡಿ ರಸ್ತೆಗಳನ್ನು ದುರಸ್ತಿಪಡಿಸಲಾಗುವುದು‌ ಎಂದು ಭರವಸೆ ನೀಡಿದ ಬಳಿಕ ಕಾಂಗ್ರೆಸ್ ಸದಸ್ಯರು ತಮ್ಮ ಪ್ರತಿಭಟನೆ ವಾಪಾಸು ಪಡೆದರು.

ಪುರಸಭೆ ವ್ಯಾಪ್ತಿಯ ಬಸ್ಸು ನಿಲ್ದಾಣದ ಸಮೀಪದಲ್ಲಿನ ಶಿಕ್ಷಣ ಇಲಾಖೆಯ ಜಾಗದಲ್ಲಿ ಪುರಸಭೆ ದಿನವಹಿ ಸುಂಕ ವಸೂಲಿ ಮಾಡುವುದು ಸರಿಯೇ ಎಂದು ಪುರಸಭಾ ಸದಸ್ಯ ಆಶ್ಪಕ್ ಅಹಮ್ಮದ್ ಪ್ರಶ್ನಿಸಿದರು ‌.ಇದಕ್ಕೆ ಪುರಸಭಾ ಸದಸ್ಯ ಯೋಗೀಶ್ ದೇವಾಡಿಗ ಮಾತನಾಡಿ, ಕಾರ್ಕಳ ನಗರದಾದ್ಯಂತ ಎಲ್ಲಾ ಕಡೆಗಳಲ್ಲಿ ಸರಕಾರಿ ಜಾಗದಲ್ಲಿ ಗೂಡಂಗಡಿಗಳಿದ್ದು ಸುಂಕ‌ ವಸೂಲಿಯಿಂದ ಸರಕಾರಕ್ಕೆ ಆದಾಯ ಬರುತ್ತದೆ ಎಂದರು.


ಪುರಸಭೆಯ ಅಧೀನದಲ್ಲಿರುವ ಅಂಗಡಿಗಳ ಬಾಡಿಗೆ ಬಾಕಿ ಹಾಗೂ ಒಳಬಾಡಿಗೆ ವಿಚಾರದಲ್ಲಿ ಪುರಸಭಾ ಸದಸ್ಯ ಸೋಮನಾಥ ನಾಯ್ಕ್ ವಿಷಯ ಪ್ರಸ್ತಾಪಿಸಿ, ಬಾಡಿಗೆ ಬಾಕಿ‌ ಇರಿಸಿರುವ ಬಾಡಿಗೆದಾರರು ತಮ್ಮ ಅಂಗಡಿ ಕೋಣೆಗಳನ್ನು ಒಳಬಾಡಿಗೆ ಆಧಾರದಲ್ಲಿ ಕೊಟ್ಟು ಬಾಡಿಗೆ ವಸೂಲಿ ಮಾಡಿದ್ದರೂ ಪುರಸಭೆಗೆ 2 ವರ್ಷಗಳಿಂದ ಬಾಡಿಗೆ ಬಾಕಿ ಇರಿಸಿದ್ದು ಇದರಲ್ಲಿ ಪುರಸಭೆ ಸಿಬ್ಬಂದಿಗಳೇ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.


ಈ ಬಗ್ಗೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉತ್ತರಿಸಿ ಬಾಡಿಗೆ ಬಾಕಿ ಇರಿಸಿರುವ ಬಾಡಿಗೆದಾರಿಗೆ ನೋಟಿಸ್ ಜಾರಿಗೊಳಿಸಿ ವಸೂಲಾತಿಗೆ ಕ್ರಮ ವಹಿಸಲಾಗುವುದೆಂದರು.


ಸಭೆಯಲ್ಲಿ ಪ್ರತಿಧ್ವನಿಸಿದ ಬಸ್ ನಿಲ್ದಾಣ ವಿವಾದ!


ಹಾಲಿ ವಿಸ್ತೃತ ಬಸ್ಸು ನಿಲ್ದಾಣ ಹಾಗೂ ಬಂಡೀಮಠ  ಬಸ್ಸು ನಿಲ್ದಾಣಗಳನ್ನು ಸಮಾನವಾಗಿ ಬಳಸಬೇಕೆಂದು ಹೈಕೋರ್ಟ್ ಆದೇಶ ನೀಡಿ 8 ವರ್ಷ ಕಳೆದರೂ ಇಂದಿಗೂ ಹೈಕೋರ್ಟ್ ಆದೇಶ ಪಾಲನೆಯಾಗಿಲ್ಲ ಇದು ನ್ಯಾಯಾಂಗ ನಿಂದನೆಯಾಗುತ್ತದೆ, ಕಾರ್ಕಳದ ಹಾಲಿ ಬಸ್ಸು ನಿಲ್ದಾಣದಲ್ಲಿ 25 ಸೆಂಟ್ಸ್ ಜಾಗ ಅಂಚೆ ಕಚೇರಿ ಸುಪರ್ದಿಯಲ್ಲಿದ್ದು ,ಅಂಚೆ ಇಲಾಖೆ ಅದನ್ನು ತನ್ನ ವಶಕ್ಕೆ ಪಡೆದರೆ ಬಸ್ಸು ನಿಲ್ದಾಣವನ್ನು ಎಲ್ಲಿಗೆ ಸ್ಥಳಾಂತರಿಸುತ್ತೀರಿ ಎಂದು ಪ್ರಶ್ನಿಸಿದರು. ಅಲ್ಲದೇ ಉಭಯ ಬಸ್ಸು ನಿಲ್ದಾಣಗಳನ್ನು ಸಮಾನ ಬಳಕೆ ಕುರಿತು ಹೈಕೋರ್ಟ್ ಆದೇಶವನ್ನು ಅನುಷ್ಠಾನಿಸಬೇಕೆಂದು ಬಿಗಿಪಟ್ಟು ಹಿಡಿದರು. ಈ ಬಗ್ಗೆ ಮುಖ್ಯಾಧಿಕಾರಿ ಮಾತನಾಡಿ, ಸಮಾನ ಬಳಕೆ ಕುರಿತು ನ್ಯಾಯಾಲಯದ ಆದೇಶ ನೀಡಿದೆ ಆದ್ದರಿಂದ ಜಿಲ್ಲಾಧಿಕಾರಿ ಈ ಬಗ್ಗೆ ಮರುಆದೇಶ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಬಾಲಿಶ ಉತ್ತರ ನೀಡಿದರು, ನ್ಯಾಯಾಲಯವು ಜಿಲ್ಲಾಡಳಿತಕ್ಕೆ ನೀಡಿರುವ ಆದೇಶವನ್ನು ಪಾಲನೆ ಮಾಡುವ ಹೊಣೆಗಾರಿಕೆ ಜಿಲ್ಲಾಡಳಿತ ವಹಿಸಬೇಕು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ ಆದ್ದರಿಂದ ಜಿಲ್ಲಾಧಿಕಾರಿಗಳು ಹೈಕೋರ್ಟ್ ಆದೇಶದನ್ವಯ ಸುತ್ತೋಲೆ ಹೊರಡಿಸಿ ಅನುಷ್ಠಾನಗೊಳಿಸಬೇಕಿದೆ.


ಈ‌ ಸಭೆಯಲ್ಲಿ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಥಾಯೀ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಮಲ್ಯ ಉಪಸ್ಥಿತರಿದ್ದರು.

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget