ಕಾರ್ಕಳ: ಡಾ.ಶೇಖರ ಅಜೆಕಾರಿಗೆ ಕರ್ನಾಟಕ ಪ್ರೆಸ್ ಕೌನ್ಸಿಲ್ ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿ-Times of karkala


ಕಾರ್ಕಳ: ಡಾ.ಶೇಖರ ಅಜೆಕಾರಿಗೆ ಕರ್ನಾಟಕ ಪ್ರೆಸ್ ಕೌನ್ಸಿಲ್ ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿ

ಹಿರಿಯ ಪತ್ರಕರ್ತ, ಛಾಯಾಗ್ರಾಹಕ, ಸಾಹಿತಿ, ಸಂಘಟಕ, ಪ್ರಕಾಶಕ, ಪ್ರತಿಭಾ ಪೋಷಕ ಡಾ.ಶೇಖರ ಅಜೆಕಾರು ಅವರಿಗೆ ಮಾಧ್ಯಮ ಕ್ಷೇತ್ರದ ಸುದೀರ್ಘ ಸೇವೆಗಾಗಿ ಕರ್ನಾಟಕ ಪ್ರೆಸ್ ಕೌನ್ಸಿಲ್‌ನ 2021 ರ ಸಾಲಿನ ಪ್ರತಿಷ್ಠಿತ ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿಯನ್ನು ಡಿಸೆಂಬರ್ 27 ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನೀಡಲಾಗುವುದು ಎಂದು ಕೌನ್ಸಿಲ್‌ನ ಅಧ್ಯಕ್ಷ ಡಾ.ಬಿ.ಶಿವ ಕುಮಾರ್ ನಾಗರ ನವಿಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

20 ಮಂದಿ ಹಿರಿಯ ಸಾಧಕರಿಗೆ ಈ ಗೌರವ ನೀಡಲಾಗುತ್ತಿದ್ದು ಕರಾವಳಿಯಿಂದ ಆಯ್ಕೆಯಾಗಿರುವ ಏಕೈಕ ಪತ್ರಕರ್ತರಾಗಿದ್ದಾರೆ. ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ ಸೋಮಶೇಖರ್, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಡಾ.ಟಿ.ಎಸ್.ನಾಗಾಭರಣ ಸಹಿತ ಗಣ್ಯರು ಈ ಗೌರವ ಪ್ರಧಾನಿಸುವರು.ವಿದ್ಯಾರ್ಥಿ ಜೀವನದಲ್ಲಿ ಯುವಸ್ಪಂದನ ಪತ್ರಿಕೆಯ ಮೂಲಕ ಗಮನ ಸೆಳೆದಿದ್ದ ಅಜೆಕಾರು ಅವರು ಕುಂದಪ್ರಭ ವಾರಪತ್ರಿಕೆಯ ಮೂಲಕ ವೃತ್ತಿ ಪತ್ರಿಕೋದ್ಯಮಕ್ಕೆ ಕಾಲಿರಿಸಿದರು. ಮುಂಬಯಿಯ ಕರ್ನಾಟಕ ಮಲ್ಲದಲ್ಲಿ ಸುಮಾರು ದಶಕಗಳ ಕಾಲ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ ಅವರು ಸಂಕಷ್ಟ ಕಾಲದಲ್ಲಿ ಸಂಪಾದಕ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಜನವಾಹಿನಿಯ ಪ್ರಧಾನ ವರದಿಗಾರರಾಗಿದ್ದರು. ಬಳಿಕ ಕನ್ನಡಪ್ರಭ, ಉಷಾಕಿರಣ ಪತ್ರಿಕೆಗಳ ಸುದ್ಧಿಗಾರರಾಗಿದ್ದರು. ದೈಜಿವರ್ಲ್ಡ್ ಮೀಡಿಯಾದ ವರದಿಗಾರರಾಗಿದ್ದರು. ಪ್ರಸ್ತುತ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಗೌರವ ಸಹಸಂಪಾದಕರಾಗಿದ್ದಾರೆ.


ಉಡುಪಿ ಜಿಲ್ಲಾ ರಾಜ್ಯೋತ್ಸವ 2019, ವಿಶ್ವಚೇತನ, ಕರುನಾಡ ಪದ್ಮಶ್ರೀ, ಅಗ್ನಿ ಶಿಖಾ ಮಂಚ್ ಅವಾರ್ಡ್, ಆಮಂತ್ರಣ ಅವಾರ್ಡ್, ತುಳುವ ಮಾಧ್ಯಮ ಸಿರಿ, ಬಸವಶ್ರೀ ರಾಷ್ಟ್ರೀಯ ಪುರಸ್ಕಾರ, ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ, ಕಾಸರಗೋಡು ದಸರಾ ಪ್ರಶಸ್ತಿ, ಬಸವಶ್ರೀ ರಾಷ್ಟ್ರೀಯ ಆದರ್ಶ ದಂಪತಿ, ವೀರ ಮದಕರಿ ನಾಯಕ ಭಾರತ ಜ್ಯೋತಿ ರಾಷ್ಟ್ರೀಯ ಪ್ರಶಸ್ತಿ, ಕೃಷಿಕ ಬಂಧು, ಡಾ.ಸಿದ್ಧಯ್ಯ ಪುರಾಣಿಕ ಪ್ರಶಸ್ತಿ ಸಹಿತ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.


ಕಂಬಳದ ಕುರಿತು 5 ಪುಸ್ತಕ ಸರಣಿಯನ್ನು ಬಿಡುಗಡೆ ಮಾಡಿದ್ದು ಅವರ 27 ಕೃತಿಗಳು ಪ್ರಕಟವಾಗಿವೆ. ಕನ್ನಡ ಮೊದಲ ಈ- ಕವನಸಂಕಲನ ಸೂರ್‍ಯ ಶಿಖಾರಿಗೆ ಮುನ್ನ ಖ್ಯಾತ ವಿಮರ್ಶಕ ಅರವಿಂದ ಚೊಕ್ಕಾಡಿ ಅವರ ಮುನ್ನುಡಿಯೊಂದಿಗೆ ಪ್ರಕಟವಾಗಿದೆ. ವಿಶ್ವದ ಏಕೈಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ರೂವಾರಿಯಾಗಿ, ಸಮಿತಿಯ ರಾಜ್ಯಾಧ್ಯಕ್ಷರಾಗಿ, 12 ಸಮ್ಮೇಳನಗಳನ್ನು ಮುನ್ನಡೆಸಿದ್ದಾರೆ. ಅವರ ಕುರಿತ ದೀಪಕ್ ಎನ್ ದುರ್ಗಾ ಅವರ ಕೃತಿ ಅಜೆಕಾರಿನ ಅಜೆಕಾರು ಬಿಡುಗಡೆಯಾಗಿದೆ. 31 ನೇ ದೆಹಲಿ ಕನ್ನಡಿಗ ಸಾಹಿತ್ಯ ಸಮ್ಮೇಳನದ ಗೌರವ ಸಂದಿದೆ. ಆದಿಗ್ರಾಮೋತ್ಸವ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕನ್ನಡ ಗೀತೆಗಳ ಯಕ್ಷ ಸಂಗೀತ, ಅಂಗನವಾಡಿ ಮಕ್ಕಳ ಮೇಳ ಸೇರಿದಂತೆ ಹಲವಾರು ಹೊಸತನದ ಶೋಧಕರಾಗಿದ್ದಾರೆ. ಮುಂಬಯಿಯ ಕನ್ನಡ ಸಂಘದ ಪೊವಾಯಿ ಇದರ ಸ್ಥಾಪಕಾಧ್ಯಕ್ಷರಾಗಿದ್ದು ಪೊವಾಯಿ ಪಾಸ್‌ಪೋಲಿ ಕನ್ನಡ ಶಾಲೆಯ ಸ್ಥಾಪನೆಯ ಹಿಂದಿನ ಶಕ್ತಿಯಾಗಿದ್ದಾರೆ.

 
Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget