ಕಾರ್ಕಳದಲ್ಲಿ ಯಕ್ಷ ರಂಗಾಯಣ ಸ್ಥಾಪನೆ' -ಸಚಿವ ಸುನಿಲ್‌ಕುಮಾರ್-Times Of Karkala

 'ಕಾರ್ಕಳದಲ್ಲಿ ಯಕ್ಷ ರಂಗಾಯಣ ಸ್ಥಾಪನೆ' -ಸಚಿವ ಸುನಿಲ್‌ಕುಮಾರ್-Times Of Karkala
 ಕಾರ್ಕಳ: ಕರಾವಳಿ ಮತ್ತು ಮಲೆನಾಡು ಪ್ರದೇಶವು ಅತ್ಯಂತ ಶ್ರೀಮಂತ ಕಲೆ ಯಕ್ಷಗಾನ ಮತ್ತು ಸಾಂಸ್ಕೃತಿಕ ಹಿರಿಮೆಗೆ ಪ್ರಸಿದ್ಧ. ಈಗ ಈ ಭಾಗದ ರಂಗಭೂಮಿ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣವಾಗಿದ್ದು, ಕರ್ನಾಟಕದ ಆರನೇ ರಂಗಾಯಣವಾಗಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಯಕ್ಷ ರಂಗಾಯಣವು ಆರಂಭವಾಗಲಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಸಚಿವರು, "ಈಗಾಗಲೇ ಸರ್ಕಾರಿ ಆದೇಶವು ಹೊರಬಿದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ಯಕ್ಷ ರಂಗಾಯಣವು ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್‌ನ ಬಳಿ ಕಾರ್ಯಾರಂಭವಾಗಲಿದೆ" ಎಂದರು.


ರಾಜ್ಯದಲ್ಲಿ ಮೊಟ್ಟ ಮೊದಲ ರಂಗಾಯಣ 1989ರಲ್ಲಿ ಮೈಸೂರಿನಲ್ಲಿ ಖ್ಯಾತ ರಂಗಕರ್ಮಿ ಬಿ.ವಿ. ಕಾರಂತರ ಕನಸಾಗಿ ಮೂಡಿಬಂತು. ನಂತರ ಧಾರವಾಡ, ಕಲಬುರಗಿ ಹಾಗೂ ಶಿವಮೊಗ್ಗಗಳಲ್ಲಿ ಉಳಿದ ಮೂರು ರಂಗಾಯಣಗಳು ಸ್ಥಾಪಿತವಾದವು. ವೃತ್ತಿರಂಗಭೂಮಿ ಕೇಂದ್ರವಾದ ದಾವಣಗೆರೆಯಲ್ಲಿ ಕರ್ನಾಟಕ ವೃತ್ತಿ ರಂಗಭೂಮಿ ರಂಗಾಯಣವು ರಾಜ್ಯದ ಐದನೇ ರಂಗಾಯಣವಾಗಿ ಕಳೆದ ವರ್ಷ ಕಾರ್ಯಾರಂಭ ಮಾಡಿದೆ. ಯಕ್ಷರಂಗಾಯಣದಲ್ಲಿ ತುಳು ನಾಟಕದ ಹಿನ್ನೆಲೆಯಲ್ಲಿನ ನಾಟಕಗಳ ರಂಗಪ್ರಯೋಗ ಹಾಗೂ ಪ್ರದರ್ಶನ ಹಾಗೂ ತೆಂಕು, ಬಡಗು ತಿಟ್ಟಿನ ಯಕ್ಷಗಾನ ಆಧಾರಿತ ನಾಟಕಗಳ ರಂಗಶಾಲೆ ರೂಪುಗೊಳ್ಳಲಿದೆ. ವಿವಿಧ ರಂಗ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಯೋಜನೆ ಇದೆ. ಯಕ್ಷಗಾನ ತರಬೇತಿ, ರಂಗ ಶಿಬಿರಗಳು, ಕರಾವಳಿ/ಮಲೆನಾಡಿನ ಪ್ರಾದೇಶಿಕ ಸೊಗಡನ್ನು ಪರಿಚಯಿಸುವ ನಾನಾ ರಂಗ ಚಟುವಟಿಕೆಗಳು ಆರಂಭವಾಗಲಿವೆ.

ಇನ್ನು ಕಾರ್ಕಳದ ಕೋಟಿ ಚೆನ್ನಯ ಥೀಮ್‌ಪಾರ್ಕ್‌ನ ಬಳಿ ಎರಡು ಎಕರೆ ವಿಶಾಲ ಆವರಣದಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ರಂಗಶಾಲೆಗಾಗಿ ಅವಶ್ಯವಿರುವ ಕೊಠಡಿಗಳು, ರಂಗವೇದಿಕೆ, ಸಭಾಂಗಣ, ಕಚೇರಿ ಹಾಗೂ ಇತರ ಅವಶ್ಯಕತೆಗಳಿಗೆ ತಕ್ಕ ಸ್ಥಳವು ಈ ಕಟ್ಟಡದಲ್ಲಿ ಲಭ್ಯವಿದೆ. ಯಕ್ಷಗಾನದ ತೆಂಕು ಮತ್ತು ಬಡಗು ಎರಡೂ ತಿಟ್ಟುಗಳನ್ನು ಸಮನ್ವಯಗೊಳಿಸಲು ಕಾರ್ಕಳ ಸೂಕ್ತ ಕೇಂದ್ರಸ್ಥಾನವಾಗುತ್ತದೆ.

ಶಿವರಾಮ ಕಾರಂತರ ಯಕ್ಷಗಾನ ಹಾಗೂ ಬಿ.ವಿ. ಕಾರಂತರ ರಂಗಭೂಮಿ- ಈ ಇಬ್ಬರು ಸಾಧಕರ ಮಾದರಿಯಾಗಿಟ್ಟುಕೊಂಡು, ರಂಗಾಯಣವು ರಂಗಭೂಮಿ ಮತ್ತು ಯಕ್ಷಗಾನ ಕಲೆಯ ಕೊಂಡಿಯಾಗಿ ಕೆಲಸ ಮಾಡಲಿದೆ. ಈ ಇಬ್ಬರು ಯಕ್ಷ-ರಂಗ ಭೀಷ್ಮರು ರೂಪಿಸಿದ ಅಂಶಗಳನ್ನು ಕರಾವಳಿ ಭಾಗದ ಸಾಂಸ್ಕೃತಿಕ ಸೊಗಡನ್ನು ಅಳವಡಿಸಿಕೊಂಡು ರಂಗಚಟುವಟಿಕೆಗಳನ್ನು ಆರಂಭಿಸಲಾಗುತ್ತದೆ. ಕಾರ್ಕಳದಲ್ಲಿ ಸ್ಥಾಪಿತಗೊಳ್ಳುತ್ತಿರುವ ಯಕ್ಷರಂಗಾಯಣಕ್ಕೆ ಶೀಘ್ರದಲ್ಲಿ ಪೂರ್ಣಾವಧಿ ನಿರ್ದೇಶಕರನ್ನು ನೇಮಕ ಮಾಡಲಾಗುವುದು. ಹಾಗೂ ಪರಿಣತರ ಸಮಿತಿ ರಚಿಸಿ ಕಾರ್ಯಚಟುವಟಿಕೆಗಳನ್ನು ಆರಂಭಿಸಲಾಗುವುದು. ನಂತರ, ಸರ್ಕಾರದಿಂದ ಸೃಜನೆಗೊಂಡ ಉಳಿದ ಆಡಳಿತಾತ್ಮಕ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget